ಕಾನೂನು ಬಾಹಿರ ಧ್ವನಿವರ್ಧಕಗಳ ತೆರವಿಗೆ ಯುಪಿ ಸರ್ಕಾರ ಆದೇಶ…

49
firstsuddi

ಲಖನೌ : ರಾಜ್ಯಾದ್ಯಂತ ಧಾರ್ಮಿಕ ಸ್ಥಳಗಳಲ್ಲಿ ಕಾನೂನು ಬಾಹಿರವಾಗಿ ಅಳವಡಿಸಲಾಗಿರುವ ಧ್ವನಿವರ್ಧಕಗಳನ್ನು ತೆಗೆದುಹಾಕಲು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಆದೇಶ ನೀಡಿದೆ.

ಈ ಕುರಿತು ಮಾಹಿತಿ ನೀಡಿರುವ ರಾಜ್ಯದ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ, ರಾಜ್ಯದ ಧಾರ್ಮಿಕ ಸ್ಥಳಗಳಿಂದ ಅಕ್ರಮ ಧ್ವನಿವರ್ಧಕಗಳನ್ನು ತೆಗೆದುಹಾಕಲು ಆದೇಶ ಹೊರಡಿಸಲಾಗಿದೆ. ಈ ಸಂಬಂಧ ಏಪ್ರಿಲ್ 30ರೊಳಗೆ ವರದಿಯನ್ನು ಜಿಲ್ಲೆಗಳಿಂದ ಕೋರಲಾಗಿದೆ. ರಾಜ್ಯದಲ್ಲಿ ಶಬ್ದದ ಮಿತಿ ಉಲ್ಲಂಘಿಸುವ ಧಾರ್ಮಿಕ ಸ್ಥಳಗಳನ್ನು ಪಟ್ಟಿ ಮಾಡಲು ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಧಾರ್ಮಿಕ ಮುಖಂಡರೊಂದಿಗೆ ಈ ಕೂಡಲೇ ಮಾತುಕತೆ ನಡೆಸಲು ಮತ್ತು ಅನಧಿಕೃತ ಧ್ವನಿವರ್ಧಕಗಳನ್ನು ತೆಗೆದು ಹಾಕಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕಳೆದ ವಾರವಷ್ಟೇ ಸಿಎಂ ಯೋಗಿ ಆದಿತ್ಯನಾಥ್ ಅವರು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಶಬ್ದಕ್ಕೆ ಮಿತಿ ಹೇರಲು ನಿರ್ದೇಶನ ನೀಡಿದ್ದರು. ಇದರ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.