ಪ್ಯಾರಿಸ್: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಯುರೋಪ್ ಪ್ರವಾಸದ ಕೊನೆಯಲ್ಲಿ ಫ್ರಾನ್ಸ್ಗೆ ಭೇಟಿ ನೀಡಿದ್ದು, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರನ್ನು ಭೇಟಿ ಮಾಡಿದ್ದಾರೆ.
ಈ ವೇಳೆ ಉಭಯ ನಾಯಕರು ಉಕ್ರೇನ್ ಹಾಗೂ ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಗಳ ಬಗ್ಗೆ ಚರ್ಚಿಸಿದ್ದಾರೆ. ಇದಲ್ಲದೇ, ರಕ್ಷಣಾ ಸಹಕಾರ, ಬಾಹ್ಯಾಕಾಶ, ಆರ್ಥಿಕತೆ, ನಾಗರಿಕ ಪರಮಾಣು ಮತ್ತು ಜನರ ನಡುವಿನ ಸಂಬಂಧ ಸೇರಿದಂತೆ ದ್ವಿಪಕ್ಷೀಯ ಒಪ್ಪಂದಗಳ ಬಗ್ಗೆ ಉಭಯ ನಾಯಕರು ಸಮಾಲೋಚಿಸಿದರು.

ಉಭಯ ನಾಯಕರ ಮಾತುಕತೆಯ ವೇಳೆ ಉಕ್ರೇನ್ ಸಂಘರ್ಷ, ಮಾನವ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತವಾಯಿತು. ರಷ್ಯಾ ಪಡೆಗಳಿಂದ ಉಕ್ರೇನ್ ವಿರುದ್ಧ ಕಾನೂನುಬಾಹಿರ ಮತ್ತು ಅಪ್ರಚೋದಿತ ಆಕ್ರಮಣವನ್ನು ಫ್ರಾನ್ಸ್ ಬಲವಾಗಿ ಖಂಡಿಸಿತು. ಅಲ್ಲದೇ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಸರ್ಕಾರ ಅಲ್ಲಿನ ಜನರ ವಿರುದ್ಧ ನಡೆಸುತ್ತಿರುವ ಕ್ರೌರ್ಯದ ಬಗ್ಗೆಯೂ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಮತ್ತು ಮೋದಿ ಕಳವಳ ವ್ಯಕ್ತಪಡಿಸಿದರು. ಶಾಂತಿಯುತ, ಸುರಕ್ಷಿತ ಮತ್ತು ಸ್ಥಿರ ಅಫ್ಘಾನಿಸ್ತಾನಕ್ಕಾಗಿ ಉಭಯ ನಾಯಕರು ಬೆಂಬಲ ವ್ಯಕ್ತಪಡಿಸಿದರು.
ಪ್ರಧಾನಿಗಳ ಕಚೇರಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಪ್ಯಾರಿಸ್ ನಲ್ಲಿ ಭೇಟಿ ಮಾಡಿದ್ದು, ಈ ಭೇಟಿ ಭಾರತ-ಫ್ರಾನ್ಸ್ ಸ್ನೇಹ ಸಂಬಂಧಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಹೇಳಿದೆ.










