ಮೆಹ್ಸಾನಾ : ಅನುಮತಿ ಇಲ್ಲದೇ ಆಜಾದಿ ಮೆರವಣಿಗೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಹಾಗೂ ಇತರ ಒಂಬತ್ತು ಮಂದಿಯನ್ನು ಇಲ್ಲಿನ ಹೆಚ್ಚುವರಿ ಜ್ಯೂಡಿಸಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ದೋಷಿಗಳೆಂದು ಘೋಷಿಸಿ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿ ಜೆಎ ಪರ್ಮಾರ್ ಅವರು ಈ ಆದೇಶ ಹೊರಡಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143ರ ಅಡಿ ಈ ತೀರ್ಪು ನೀಡಲಾಗಿದೆ. ಅಲ್ಲದೇ ನ್ಯಾಯಾಲಯ ಎಲ್ಲ ಅಪರಾಧಿಗಳಿಗೆ ತಲಾ ಒಂದು ಸಾವಿರ ರೂಪಾಯಿ ದಂಡ ವಿಧಿಸಿದೆ.
ಜುಲೈ 2017 ರಲ್ಲಿ ಅನುಮತಿಯಿಲ್ಲದೆ ಮೆಹ್ಸಾನಾದಿಂದ ಬನಸ್ಕಾಂತ ಜಿಲ್ಲೆಯ ಧನೇರಾಗೆ ‘ಆಜಾದಿ ಮಾರ್ಚ್’ ಹೆಸರಿನಲ್ಲಿ ಮೆರವಣಿಗೆ ನಡೆಸಲಾಗಿತ್ತು. ಹೀಗಾಗಿ, ಪೊಲೀಸರು ಜಿಗ್ನೇಶ್ ಮೇವಾನಿ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 143 ರ ಅಡಿ ಎಫ್ಐಆರ್ ದಾಖಲಿಸಿದ್ದರು.










