ನವದೆಹಲಿ : ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಳೆಗೆ ಮುಂದೂಡಿದೆ.
ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಸುಪ್ರೀಂ ಕೋರ್ಟ್‌ಗೆ ಹಿರಿಯ ವಕೀಲ ಹರಿಶಂಕರ್ ಜೈನ್ ಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಜ್ಞಾನವಾಪಿ ಮಸೀದಿ ಸಮಸ್ಯೆಯನ್ನು ನಾಳೆ ಆಲಿಸುವಂತೆ ಮನವಿ ಮಾಡಿದರು. ಮುಸ್ಲಿಂ ಪರ ವಾದ ಮಂಡಿಸಿದ ಹಿರಿಯ ವಕೀಲ ಹುಝೆಫಾ ಅಹ್ಮದಿ, ದೇಶಾದ್ಯಂತ ಹಲವು ವ್ಯಾಜ್ಯಗಳಿದ್ದು, ತುರ್ತು ಅಗತ್ಯವಿದ್ದು, ಇಂದೇ ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯಕ್ಕೆ ಒತ್ತಾಯಿಸಿದ್ದರು. ವಾದ ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ಜ್ಞಾನವಾಪಿ ಮಸೀದಿ ವಿಚಾರಣೆ ಪ್ರಕರಣವನ್ನು ನಾಳೆ ಅಪರಾಹ್ನ 3 ಗಂಟೆಗೆ ಮುಂದೂಡಿತು.
ಈ ಮಧ್ಯೆ, ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದಲ್ಲಿರುವ ಜ್ಞಾನವಾಪಿ ಮಸೀದಿ ಆವರಣ ಪ್ರದೇಶದಲ್ಲಿ ನಡೆಸಿದ ವಿಡಿಯೋಗ್ರಾಫಿಕ್ ಸರ್ವೇ ವರದಿಯನ್ನು ತನಿಖಾ ಆಯೋಗವು ಇಂದು ವಾರಣಾಸಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಸಮೀಕ್ಷೆಗಾಗಿ ಕೋರ್ಟ್ ನೇಮಿಸಿದ್ದ ಸ್ಪೆಷಲ್ ಅಡ್ವೋಕೇಟ್ ಕಮಿಷನರ್ ವಿಶಾಲ್ ಸಿಂಗ್ ಅವರು ಮೇ 14, 15 ಮತ್ತು 16 ರಂದು ನಡೆಸಿದ ಸರ್ವೇ ವರದಿಯನ್ನು ಜಿಲ್ಲಾ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೆ ಒಪ್ಪಿಸಿದ್ದಾರೆ ಎಂದು ವಕೀಲ ಮದನ್ ಮೋಹನ್ ಯಾದವ್ ಹೇಳಿದ್ದಾರೆ.
ಇನ್ನೂ ಸಮೀಕ್ಷಾ ವರದಿ ಸಲ್ಲಿಕೆಯಾದ ಬೆನ್ನಲ್ಲೇ ಈ ಪ್ರಕರಣದ ಕುರಿತಾಗಿ ಇಂದು ಯಾವುದೇ ವಿಚಾರಣೆ ಅಥವಾ ಆದೇಶ ಹೊರಡಿಸದಂತೆ ವಾರಣಾಸಿ ಕೋರ್ಟ್ ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.










