ಎಸ್‍ಎಸ್‍ಎಲ್‍ಸಿ ಫಲಿತಾಂಶ ; 145 ವಿದ್ಯಾರ್ಥಿಗಳಿಗೆ 625 ಅಂಕ, ಬಾಲಕಿಯರೇ ಮೇಲುಗೈ…

59
firstsuddi

ಬೆಂಗಳೂರು : 2022ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಶೇ.85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದು ಕಳೆದ 10 ವರ್ಷಗಳಲ್ಲಿ ದಾಖಲೆಯ ಫಲಿತಾಂಶವಾಗಿದೆ.

ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ. 90.29ರಷ್ಟು ಬಾಲಕಿಯರು, ಶೇ. 81.30ರಷ್ಟು ಬಾಲಕರು ಪಾಸ್ ಆಗಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ, 8,73,884 ವಿದ್ಯಾರ್ಥಿಗಳ ಪೈಕಿ ಒಟ್ಟು 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 40,061 ಮಂದಿ ಗ್ರೇಸ್ ಮಾರ್ಕ್ ಮೂಲಕ ಪಾಸ್ ಆಗಿದ್ದಾರೆ.

ಈ ಬಾರಿ 625ಕ್ಕೆ 625 ಅಂಕಗಳನ್ನು 145 ಮಕ್ಕಳು ಪಡೆದಿದ್ದಾರೆ. ಈ ಪೈಕಿ 21 ಸರ್ಕಾರಿ ಶಾಲೆ, 8 ಅನುದಾನಿತ ಶಾಲೆ ಹಾಗೂ 116 ಖಾಸಗಿ ಶಾಲೆಗಳ ಮಕ್ಕಳು ಪೂರ್ಣ ಅಂಕ ಪಡೆದಿದ್ದಾರೆ. ಎಂದಿನಂತೆ ಗ್ರಾಮೀಣ ವಿದ್ಯಾರ್ಥಿಗಳೇ ಉತ್ತಮ ಸಾಧನೆ ಮಾಡಿದ್ದಾರೆ. ನಗರ ಭಾಗದಲ್ಲಿ ಶೇ.86.64 ಫಲಿತಾಂಶ ದಾಖಲಾದರೆ, ಗ್ರಾಮೀಣ ಭಾಗದಲ್ಲಿ ಶೇ.91.32 ರಷ್ಟು ಫಲಿತಾಂಶ ಪ್ರಕಟವಾಗಿದೆ.

20 ಶಾಲೆಗಳು ಶೂನ್ಯ ಸಂಪಾದನೆ ಮಾಡಿದರೆ 3,920 ಶಾಲೆಗಳು ಶೇ.100 ರಷ್ಟು ಫಲಿತಾಂಶ ದಾಖಲಿಸಿದೆ. ಈ ಬಾರಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಅಂತಿಮ ಅಂತ ಜಿಲ್ಲೆಗಳಿಗೆ ಗ್ರೇಡ್ ನೀಡಲಾಗಿಲ್ಲ. ಬದಲಾಗಿ ಎ, ಬಿ, ಸಿ ಅಂತ ಗ್ರೇಡ್ ನೀಡಲಾಗಿದೆ. ಬೆಂಗಳೂರು ದಕ್ಷಿಣ ಮತ್ತು ಯಾದಗಿರಿ ಜಿಲ್ಲೆಗೆ ಬಿ ಗ್ರೇಡ್ ಸಿಕ್ಕಿದರೆ ಉಳಿದ ಎಲ್ಲಾ ಜಿಲ್ಲೆಗಳಿಗೆ ಎ ಗ್ರೇಡ್ ಸಿಕ್ಕಿದೆ.

ಶಿಕ್ಷಣ ಸಚಿವ ನಾಗೇಶ್ ಅವರು ಈಗಾಗಲೇ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಘೋಷಿಸಿದ್ದಾರೆ. ಮಧ್ಯಾಹ್ನ 1 ಗಂಟೆಯ ನಂತರ ಇಲಾಖೆಯ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಗೊಂಡಿದ್ದು, https://karresults.nic.in/ ಮೂಲಕ ನೋಡಬಹುದಾಗಿದೆ. ಅಲ್ಲದೆ, ಮಧ್ಯಾಹ್ನ ಆಯಾ ಶಾಲೆಗಳಲ್ಲೂ ಫಲಿತಾಂಶ ಲಭ್ಯವಿರಲಿದೆ. ಇನ್ನು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್ ಗಳಿಗೆ ಎಸ್ಎಂಎಸ್ ಮೂಲಕ ಫಲಿತಾಂಶ ಕಳುಹಿಸಲಾಗುತ್ತದೆ.

ಇನ್ನೂ ಜೂನ್ 27 ರಿಂದ ಜುಲೈ 4 ವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿ ಪಡೆಯಲು ಮೇ 30ರವರೆಗೆ ಅವಕಾಶ ನೀಡಲಾಗಿದೆ. ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಜೂನ್ 6 ಕೊನೆಯ ದಿನಾಂಕವಾಗಿದೆ.