ಬೆಂಗಳೂರು : ಮೇ 16 ರಿಂದ ಪ್ರಾಥಾಮಿಕ ಹಾಗೂ ಪ್ರೌಢ ಶಾಲೆಗಳು ಪ್ರಾರಂಭಗೊಂಡಿವೆ. ಈ ಬಾರಿ ಸರ್ಕಾರ ಪಠ್ಯದಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದು, ಕೆಲವರ ಪಾಠಗಳನ್ನು ತೆಗೆದು ಹೊಸ ಪಾಠಗಳನ್ನು ಸೇರಿಸಿದೆ. ಈಗಾಗಲೇ ಹೊಸ ಪಾಠಗಳ ಸೇರ್ಪಡೆ ವಿವಾದದ ಸ್ವರೂಪ ಪಡೆದುಕೊಂಡಿದೆ. ಇದೀಗ ಶಿಕ್ಷಣ ಇಲಾಖೆಯ ಮತ್ತೊಂದು ಎಡವಟ್ಟು ಬೆಳಕಿಗೆ ಬಂದಿದೆ. ರಾಷ್ಟ್ರಕವಿ ಕುವೆಂಪು ಅವರಿಗೆ ವಮಾನ ಮಾಡಿದೆ. ಇದೀಗ ತಪ್ಪಾಗಿ ಮುದ್ರಣಗೊಂಡಿರುವ ಸಾಲುಗಳ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಾಲ್ಕನೇ ತರಗತಿ ಅಧ್ಯಯನ ಪುಸ್ತಕದಲ್ಲಿ ಕುವೆಂಪು ಅವರಿಗೆ ಚಿಕ್ಕಂದಿನಿಂದಲೂ ಕಥೆ, ಕವನ, ಪುಸ್ತಕ ಓದುವ, ಬರೆಯುವ ಹವ್ಯಾಸ ಇತ್ತು. ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂದು ಬರೆಯಲಾಗಿದೆ. ಕುವೆಂಪು ಅವರು ಅನೇಕರ ಪ್ರೋತ್ಸಾಹದಿಂದ ಪ್ರಖ್ಯಾತರಾದರಾ? ಅಂತಾ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೇ ದಿನಕ್ಕೊಂದು ತಪ್ಪು ಹೊರಬರುತ್ತಿರುವ ಹಿನ್ನಲೆ ಶಿಕ್ಷಕರು ಕೂಡ ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಪಠ್ಯ ಪುಸ್ತಕ ವಿವಾದ ಜೋರಾಗುತ್ತಿದೆ. ಪಠ್ಯ ಪುಸ್ತಕ ಮರು ಪರಿಷ್ಕರಣೆ ಅಸಮರ್ಪಕವಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯ ಪುಸ್ತಕ ಜಾರಿಗೆ ತರಬಾರದು ಅಂತ ಆಗ್ರಹಿಸಿ ನಾಡಿನ ಹಲವು ಸಾಹಿತಿಗಳು, ಪ್ರಗತಿಪರ ಚಿಂತಕರು ರಾಜ್ಯ ಸರ್ಕಾರಕ್ಕೆ ನಿನ್ನೆ ಪತ್ರ ಬರೆದಿದ್ದರು.
ಇದೀಗ ಸಾಮಾಜಿಕ ಜಾಲತಾಣದಲ್ಲೂ ಅಭಿಯಾನ ಕೈಗೊಳ್ಳಲಾಗಿದೆ. ಇಂದು ಸಂಜೆ 5 ಗಂಟೆಗೆ ಟ್ವಿಟರ್ ನಲ್ಲಿ #RejectBrahminTextBokks ಎಂಬ ಹ್ಯಾಶ್ ಟ್ಯಾಗ್ ನಡಿ ಅಭಿಯಾನ ಕೈಗೊಳ್ಳಲು ಪ್ರಗತಿಪರ ಚಿಂತಕರು, ಹೋರಾಟಗಾರು ನಿರ್ಧರಿಸಿದ್ದಾರೆ.










