ಬೆಂಗಳೂರು : ಸ್ಯಾಂಡಲ್‍ವುಡ್ ನಿರ್ದೇಶಕ, ವನ್ಯಜೀವಿ ಛಾಯಾಗ್ರಾಹಕ ಕೆ.ಎನ್.ಮೋಹನ್(56) ಅವರು ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕರಾಗಿದ್ದ ಮೋಹನ್ ಕುಮಾರ್ ಅವರು ಎಂಜಿನಿಯರಿಂಗ್ ಪದವೀಧರರಾಗಿದ್ದರು. ಮೈಸೂರು ಮಲ್ಲಿಗೆಯಲ್ಲಿ ನಾಯಕನ ಪಾತ್ರಕ್ಕೆ ಧ್ವನಿ ಸಹ ನೀಡಿದ್ದರು. ಅಲ್ಲದೇ, ಪತ್ನಿ ವತ್ಸಲಾ ರಚಿಸಿದ ಸಜ್ಜಾದನಾ ಗಣೇಶ ಕೃತಿಯಾಧರಿಸಿ ಬೊಂಬೆಯಾಟ ಎನ್ನುವ ಸಿನಿಮಾ ಮಾಡಿದ್ದರು. ಈ ಚಿತ್ರಕ್ಕೆ ಹಲವಾರು ಪ್ರಶಸ್ತಿಗಳು ಲಭಿಸಿದ್ದವು. ಅಲ್ಲದೇ ಅವರು ರಂಗಭೂಮಿ, ಧಾರವಾಹಿ, ಪತ್ರಿಕೋದ್ಯಮ ಹೀಗೆ ಹಲವರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮೃತ ಮೋಹನ್ ಕುಮಾರ್ ಅವರು ತಾಯಿ ಕಮಲಮ್ಮ, ಪತ್ನಿ ಹಾಗೂ ನಟಿ, ನಿರೂಪಕಿ ವತ್ಸಲಾ ಮೋಹನ್, ಪುತ್ರಿ ಅನನ್ಯಾ ಮೋಹನ್ ಅವರನ್ನು ಅಗಲಿದ್ದಾರೆ.
ಜಯನಗರದ 3ನೇ ಬ್ಲಾಕ್ ಪೂರ್ವ 8ನೇ ಮುಖ್ಯರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಆನೇಕಲ್ ತಾಲೂಕಿನ ಸಮಂದೂರಿನಲ್ಲಿ ಇಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.










