ವಾಷಿಂಗ್ಟನ್ : ಅಮೆರಿಕದ ಟೆಕ್ಸಾಸ್ ನ ಉವಾಲ್ಡೆಯಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 19 ಮಕ್ಕಳು ಸೇರಿ ಒಟ್ಟು 21 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
18ರ ಹರೆಯದ ಯುವಕ ಸಾಲ್ವಡೋರ್ ರಾಮೊಸ್ ಆರೋಪಿ ಎಂದು ಗುರುತಿಸಲಾಗಿದೆ. ಟೆಕ್ಸಾಸ್ ಗೌವರ್ನರ್ ಗ್ರೆಗ್ ಅಬಾಟ್ ಈ ಘಟನೆಯ ಕುರಿತು ಮಾಹಿತಿ ನೀಡಿದ್ದು, ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಜಪಾನ್ ಸೇರಿದಂತೆ ಏಷ್ಯಾದ ದೇಶಗಳಿಗೆ ಐದು ದಿನಗಳ ಪ್ರವಾಸಕ್ಕೆ ತೆರಳಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದು, ‘ಇಂತಹ ಪ್ರಕರಣಗಳು ವಿಶ್ವದ ಇತರ ದೇಶಗಳಲ್ಲಿ ಅಪರೂಪಕ್ಕೊಮ್ಮೆ ಆಗುತ್ತವೆ. ಆದರೆ, ಅಮೆರಿಕದಲ್ಲಿ ಪದೇಪದೇ ಆಗುತ್ತಿರುವುದು ವಿಷಾದದ ಸಂಗತಿ. ಮೃತರ ಗೌರವಾರ್ಥ ದೇಶವ್ಯಾಪಿ ಬಾವುಟಗಳನ್ನು ಅರ್ಧ ಮಟ್ಟಕ್ಕೆ ಹಾರಿಸುತ್ತೇವೆ ಎಂದು ಹೇಳಿದ್ದಾರೆ.
2012ರಲ್ಲಿ ಕನೆಕ್ಟಿಕಟ್ ನ ನ್ಯೂಟೌನ್ ನಲ್ಲಿರುವ ಸ್ಯಾಂಡಿ ಹುಕ್ ಎಲಿಮೆಂಟರಿ ಶಾಲೆಯಲ್ಲಿ ನಡೆದ ಭೀಕರ ಗುಂಡಿನ ದಾಳಿ ಬಳಿಕ ನಡೆದ ಅತಿ ದೊಡ್ಡ ದುರಂತ ಇದಾಗಿದೆ.










