ವಿಧಾನಪರಿಷತ್ ಅಭ್ಯರ್ಥಿಗಳ ಆಸ್ತಿ ವಿವರ ; ಬಹುತೇಕರು ಕೋಟ್ಯಧೀಶರು!

54
firstsuddi

ಬೆಂಗಳೂರು : ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರದ ಕುರಿತು ಮಾಹಿತಿ ನೀಡಿದ್ದಾರೆ. ಬಹುತೇಕರು ಕೋಟ್ಯಧಿಪತಿಗಳೇ ಆಗಿದ್ದಾರೆ. ಅವರ ಆಸ್ತಿ ವಿವರ ಇಂತಿದೆ.

ಲಕ್ಷ್ಮಣ ಸವದಿ: ಲಕ್ಷ್ಮಣ ಸವದಿ ಅವರು 5.84 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 29.59 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಪತ್ನಿ ಪುಷ್ಪಾ ಹೆಸರಲ್ಲಿ 64.21 ಲಕ್ಷ ರೂ. ಮೌಲ್ಯದ ಚರಾಸ್ತಿ ಮತ್ತು 30 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇನ್ನುಳಿದಂತೆ ಚಿನ್ನಾಭರಣಗಳು ಸವದಿ ಬಳಿ 60 ತೊಲೆ ಬಂಗಾರ, 4.5 ಕೆಜಿ ಬೆಳ್ಳಿ ಹಾಗೂ ಸವದಿ ಪತ್ನಿ ಬಳಿ 80 ತೊಲೆ ಬಂಗಾರವಿದೆ. ವಿವಿಧ ಮೂಲಗಳಿಂದ ಮಾಡಿದ 1.81 ಕೋಟಿ ರೂ. ಸಾಲ ತೋರಿಸಿದ್ದಾರೆ. ಜೊತೆಗೆ ಪತ್ನಿ ಹೆಸರಲ್ಲಿ 1 ಲಕ್ಷ ರೂ. ಬೆಳೆ ಸಾಲವಿದೆ.

ಹೇಮಲತಾ ನಾಯಕ್: ಹೇಮಲತಾ ನಾಯಕ್ ಅವರ ಚರಾಸ್ತಿ 28.68 ಲಕ್ಷ ರೂ. ಇದ್ದರೆ, ಪತಿ ಚರಾಸ್ತಿ 1.75 ಲಕ್ಷ ರೂ. ಇದೆ. ಸ್ಥಿರಾಸ್ತಿ ಮೌಲ್ಯ 28 ಲಕ್ಷ ರೂ. ಇದೆ. ಕೊಪ್ಪಳ ತಾಲೂಕು ಭಾಗ್ಯನಗರದಲ್ಲಿ ಚಾಲ್ತಿ ಮಾರುಕಟ್ಟೆ ಮೌಲ್ಯದ ಪ್ರಕಾರ ತಲಾ 9.60 ಲಕ್ಷ ರೂ. ಬೆಲೆಬಾಳುವ ಮೂರು ನಿವೇಶನಗಳು, ಗಂಡನ ಹೆಸರಿನಲ್ಲಿ ಚಾಲ್ತಿ ಮಾರುಕಟ್ಟೆ ಮೌಲ್ಯದ ಪ್ರಕಾರ 12 ಲಕ್ಷ ರೂ. ಬೆಲೆಬಾಳುವ ಮನೆಯಿದೆ.

ಕೇಶವ್ ಪ್ರಸಾದ್: ಕೇಶವ್ ಪ್ರಸಾದ್ ಅವರ ಚರಾಸ್ತಿ/ಸ್ಥಿರಾಸ್ತಿ ಮೌಲ್ಯ ಒಟ್ಟಾರೆಯಾಗಿ 89.58 ಲಕ್ಷ ಇದೆ. ಅವರ ಪತ್ನಿ ಸಾವಿತ್ರಿ 1.98 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಛಲವಾದಿ ನಾರಾಯಣ ಸ್ವಾಮಿ: ಛಲಾವದಿ ಒಟ್ಟು ಚರಾಸ್ತಿ 23.09 ಲಕ್ಷ ರೂ. ಇದ್ದು, ಪತ್ನಿ ಸುನಂದಾ ಚರಾಸ್ತಿ 23.99 ಲಕ್ಷ ರೂ. ಇದೆ. ಛಲವಾದಿಯ ಸ್ಥಿರಾಸ್ತಿ ಮೌಲ್ಯ 5.85 ಕೋಟಿ ರೂ. ಆಗಿದ್ದು. ಅವರ ಪತ್ನಿ ಸುನಂದ ಅವರ ಬಳಿ ಸ್ಥಿರಾಸ್ತಿ ಇಲ್ಲ ಎಂದು ಉಲ್ಲೇಖವಾಗಿದೆ. ಛಲವಾದಿ ಸ್ವತ: ಖರೀದಿಸಿದ ಆಸ್ತಿ ಮೌಲ್ಯ 63.96 ಲಕ್ಷ ರೂ. ಆಗಿದೆ.

ಕಾಂಗ್ರೆಸ್ ಅಭ್ಯರ್ಥಿ ನಾಗರಾಜ್ ಯಾದವ್: ಎಂ.ನಾಗರಾಜ ಯಾದವ್ ಅವರು ತಮ್ಮ ಕುಟುಂಬ ಒಟ್ಟು 7.20 ಕೋಟಿ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಹೊಂದಿರುವುದಾಗಿ ಆಸ್ತಿ ವಿವರದಲ್ಲಿ ಘೋಷಿಸಿಕೊಂಡಿದ್ದಾರೆ. ತಮ್ಮ ಹಾಗೂ ತಮ್ಮ ಪತ್ನಿ ಬಳಿ ತಲಾ 20 ಸಾವಿರ ರೂ. ನಗದು, ಬ್ಯಾಂಕ್ ಖಾತೆಗಳಲ್ಲಿ 31.63 ಲಕ್ಷ ರೂ., 5 ಲಕ್ಷ ರೂ. ಮೌಲ್ಯದ ವಿಮೆ, 9 ಲಕ್ಷ ರೂ. ಮೌಲ್ಯದ ಕಾರು, 2.25 ಲಕ್ಷ ರೂ. ಮೊತ್ತದ ಚಿನ್ನಾಭರಣ ಹಾಗೂ ತಮ್ಮ ಪತ್ನಿ ಬ್ಯಾಂಕ್ ಖಾತೆಯಲ್ಲಿ 23.56 ಲಕ್ಷ ರೂ. ಹಣ, 4.81 ಲಕ್ಷ ರೂ. ಬೆಲೆಯ ಕಾರು, 23.75 ಲಕ್ಷ ರೂ. ಮೌಲ್ಯದ 500 ಗ್ರಾಂ ಚಿನ್ನಾಭರಣ ಸೇರಿ ಇಬ್ಬರ ಬಳಿ ಒಟ್ಟು 1.08 ಕೋಟಿ ರೂ. ಚರಾಸ್ತಿ ಇರುವುದಾಗಿ ತಿಳಿಸಿದ್ದಾರೆ.

ಅಬ್ದುಲ್ ಜಬ್ಬಾರ್ : ಒಟ್ಟು ಆಸ್ತಿಯ ಮೌಲ್ಯವು 6.95 ಕೋಟಿ ರೂ. ಇದ್ದು, ಚರಾಸ್ತಿ 45 ಲಕ್ಷ ರೂ. ಹಾಗೂ ಸ್ಥಿರಾಸ್ತಿ ಮೌಲ್ಯವು 6.50 ಕೋಟಿ ರೂ. ಇದೆ. ತಮ್ಮ ಕೈಯಲ್ಲಿ 50 ಸಾವಿರ ರೂ., ಪತ್ನಿ ಬಳಿ 10 ಸಾವಿರ ರೂ. ನಗದು ಇದ್ದು, ಬ್ಯಾಂಕ್ ನಲ್ಲಿ 13.14 ಲಕ್ಷ ರೂ., ಪತ್ನಿ 4.69 ಲಕ್ಷ ರೂ. ನಗದು ಮತ್ತು 2 ಲಕ್ಷ ರೂ. ಠೇವಣಿ ಹೊಂದಿದ್ದಾರೆ. ತಮ್ಮ ಬಳಿ 10 ಲಕ್ಷ ರೂ. ಮೌಲ್ಯದ ಟೊಯೋಟಾ ಇನೋವಾ ಕಾರು, 10 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನಾಭರಣ, ಪತ್ನಿ ಬಳಿ 5 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನಾಭರಣ ಸೇರಿ ಇಬ್ಬರ ಬಳಿ ಒಟ್ಟು 45.43 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ಉಲ್ಲೇಖಿಸಿದ್ದಾರೆ. ಜತೆಗೆ 71.36 ಲಕ್ಷ ರೂ. ಸಾಲ ಹೊಂದಿರುವುದಾಗಿ ತಿಳಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಟಿ.ಎ.ಶರವಣ: ಟಿ.ಎ.ಶರವಣ ಅವರು 41.79 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಶರವಣ ಪತ್ನಿಯಿಂದ 6 ಕೋಟಿ ರೂ. ಮತ್ತು ಪುತ್ರಿ ಶೃತಿಯಿಂದ 10 ಲಕ್ಷ ರೂ. ಕೈ ಸಾಲ ಪಡೆದಿದ್ದಾರೆ. ತಮ್ಮ ಆಸ್ತಿವಿವರದಲ್ಲಿ 41,79,64,103 ರೂ. ಹೊಂದಿರುವ ಬಗ್ಗೆ ನಮೂದಿಸಿದ್ದಾರೆ.

ಶರವಣ ಹೆಸರಲ್ಲಿ 3,25,19,568 ರೂ. ಮತ್ತು 26,36,49,757 ರೂ. ಸ್ಥಿರಾಸ್ತಿ ಇದೆ. ಪತ್ನಿ ಶೀಲಾದೇವಿ ಹೆಸರಲ್ಲಿ 6,87,87,184 ರೂ. ಚರಾಸ್ತಿ ಹಾಗೂ 5,00,43,800 ರೂ. ಸ್ಥಿರಾಸ್ತಿ ಇದೆ ಎಂದು ಆಸ್ತಿ ವಿವರದಲ್ಲಿ ಉಲ್ಲೇಖಿಸಲಾಗಿದೆ. ಪುತ್ರಿಯರಾದ ಶ್ರೇಯಾ ಹೆಸರಲ್ಲಿ 15,30,291 ರೂ., ಶೃತಿ ಹೆಸರಲ್ಲಿ 11,73,646 ರೂ. ಮತ್ತು ಪುತ್ರ ಸಾಯಿಪೃಥ್ವಿ ಹೆಸರಲ್ಲಿ 2,59,857 ರೂ. ಚರಾಸ್ತಿ ಇದೆ. ಆದರೆ, ಯಾರ ಹೆಸರಲ್ಲಿಯೂ ಸ್ಥಿರಾಸ್ತಿಯನ್ನು ಹೊಂದಿಲ್ಲ.