ಬೆಂಗಳೂರು : ಸಿನಿಮಾಗೆ ಬಂಡವಾಳ ಹಾಕಿ ನಷ್ಟ ಅನುಭವಿಸಿದ ಬಳಿಕ ಅಡ್ಡದಾರಿ ಹಿಡಿದು ಹಣ ಸಂಪಾದಿಸಲು ಮುಂದಾಗಿದ್ದ ಸ್ಯಾಂಡಲ್ ವುಡ್ ನಿರ್ಮಾಪಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಸಿನಿಮಾ ನಿರ್ಮಾಪಕ ಮಂಜುನಾಥ್, ಶಿವಕುಮಾರ್, ಗೋಪಾಲ್ ಹಾಗೂ ಚಂದ್ರಶೇಖರ್ ಎಂಬಾತನನ್ನ ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಂಜುನಾಥ್ ಕಾಮಿಡಿ ಸ್ಟಾರ್ ಕೋಮಲ್ ಅಭಿನಯದ ಲೊಡ್ಡೆ ಸಿನಿಮಾ ನಿರ್ಮಾಣ ಮಾಡಿದ್ದ. ಸಿನಿಮಾ ನಿರ್ಮಾಣಕ್ಕೆ ಕೋಟ್ಯಂತರ ರೂ. ಬಂಡವಾಳ ಹಾಕಿದ್ದ. ಆದರೆ ಚಿತ್ರ ನಿರೀಕ್ಷಿತ ಪ್ರದರ್ಶನ ಕಾಣದ ಹಿನ್ನೆಲೆ ನಷ್ಟ ಅನುಭವಿಸಿದ್ದರು. ಈ ಬೆನ್ನಲ್ಲೇ ನಿರ್ಮಾಪಕ ಮಂಜುನಾಥ್ ರಾಜಾಜಿನಗರದಲ್ಲಿ ಈಗಲ್ ಟ್ರೀ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ಡಾಟ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಕಚೇರಿ ತೆರೆದಿದ್ದ. ಅಷ್ಟೇ ಅಲ್ಲದೇ ನಿವೇಶನ ಮಾರಾಟ ಮಾಡುವುದಾಗಿ ಜಾಹೀರಾತು ನೀಡಿದ್ದ.
ಪುಷ್ಪಕುಮಾರ್ ಎಂಬಾತ ಜಾಹಿರಾತು ನೋಡಿ ನಿರ್ಮಾಪಕ ಮಂಜುನಾಥ್ ನನ್ನು ಸಂಪರ್ಕ ಮಾಡಿದ್ದ. ಆಗ ಮಂಜುನಾಥ್ ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ಹಂತ ಹಂತವಾಗಿ 2 ಲಕ್ಷ ಹಾಕಿಸಿಕೊಂಡಿದ್ದ. ಅಷ್ಟೇ ಅಲ್ಲದೇ ಬೇರೆ ಯಾರದ್ದೋ ಸೈಟ್ ತೋರಿಸಿ ಕೊಡಿಸೋದಾಗಿ ನಂಬಿಸಿದ್ದರು. ಸೈಟ್ ಕುರಿತು ಸೂಕ್ತ ದಾಖಲೆಗಳನ್ನ ಪುಷ್ಪಕುಮಾರ್ ಕೇಳಿದಾಗ ಮಂಜುನಾಥ್ ನ ನಿಜಬಣ್ಣ ಬಯಲಾಗಿದೆ. ಈ ಸಂಬಂಧ ರಾಜಾಜಿನಗರ ಠಾಣೆಗೆ ಪುಷ್ಪಕುಮಾರ್ ದೂರು ನೀಡಿದ್ದಾರೆ. ದೂರಿನನ್ವಯ ನಿರ್ಮಾಪಕ ಮಂಜುನಾಥ್ ಸೇರಿ ನಾಲ್ವರನ್ನ ಬಂಧಿಸಲಾಗಿದೆ.










