ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಸಿ.ಎಂ. ಪೂಣಚ್ಚ ನೇಮಕ…

53
firstsuddi

ಬೆಂಗಳೂರು : ಕರ್ನಾಟಕ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ವಕೀಲ ಸಿ.ಎಂ.ಪೂಣಚ್ಚ ಅವರು ನಿನ್ನೆ ನೇಮಕಗೊಂಡಿದ್ದಾರೆ. ರಾಷ್ಟ್ರಪತಿಗಳ ಆದೇಶದಂತೆ ಕಾನೂನು ಮತ್ತು ನ್ಯಾಯ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಪೂಣಚ್ಚ ಅವರ ಹೆಸರನ್ನು ನ್ಯಾಯಮೂರ್ತಿ ಹುದ್ದೆಗೆ ಹಿಂದಿನ ಸಿಜೆ ಎ.ಎಸ್. ಓಕ್ ನೇತೃತ್ವದ ಕೊಲಿಜಿಯಂ ಶಿಫಾರಸು ಮಾಡಿ ಸುಪ್ರೀಂಕೋರ್ಟ್ ಗೆ ಕಳುಹಿಸಿತ್ತು. ನಂತರ ಸುಪ್ರೀಂಕೋರ್ಟ್ ನ ಕೊಲಿಜಿಯಂ ಪೂಣಚ್ಚ ಅವರ ಹೆಸರನ್ನು ನ್ಯಾಯಮೂರ್ತಿ ಹುದ್ದೆಗೆ ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದೀಗ ಎಲ್ಲ ಪ್ರಕ್ರಿಯೆಗಳು ಮುಗಿದಿದ್ದು, ಅವರನ್ನು ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿದೆ.

ಸದ್ಯ ಮುಖ್ಯ ನ್ಯಾಯಮೂರ್ತಿ ಸೇರಿ 44 ನ್ಯಾಯಮೂರ್ತಿಗಳು ಸೇವೆ ಸಲ್ಲಿಸುತ್ತಿದ್ದು, ಪೂಣಚ್ಚ ಅವರ ಸೇರ್ಪಡೆಯಿಂದ ನ್ಯಾಯಮೂರ್ತಿಗಳ ಸಂಖ್ಯೆ 45ಕ್ಕೆ ಏರಿಕೆಯಾಗಲಿದೆ. ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿ ಪೀಠಗಳಿಗೆ ಒಟ್ಟು 62 ನ್ಯಾಯಮೂರ್ತಿ ಹುದ್ದೆಗಳು ಮಂಜೂರಾಗಿವೆ. ಇನ್ನೂ 17 ಹುದ್ದೆಗಳು ಖಾಲಿ ಇವೆ.