ಮುಂಬೈ : ಏಕನಾಥ್ ಶಿಂದೆ ಬಂಡಾಯವು ಶಿವಸೇನೆಗೆ ಭಾರಿ ಆಘಾತ ತಂದಿದೆ. ಜೊತೆಗೆ ಮಹಾರಾಷ್ಟ್ರದ ಮಹಾವಿಕಾಸ ಆಘಾಡಿ ಸರ್ಕಾರದ ಅಸ್ತಿತ್ವಕ್ಕೆ ಕುತ್ತು ಎದುರಾದಂತಾಗಿದೆ. ಮಹಾರಾಷ್ಟ್ರ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿರುವ ಶಿವಸೇನೆಯ ಪ್ರಮುಖ ನಾಯಕ ಏಕನಾಥ್ ಶಿಂದೆ ಸುಮಾರು 21 ಶಾಸಕರೊಂದಿಗೆ ಬಿಜೆಪಿ ಆಡಳಿತವಿರುವ ಗುಜರಾತ್ ನ ಮೆರಿಡಿಯನ್ ಹೋಟೆಲ್ ಗೆ ಶಿಫ್ಟ್ ಆಗಿದ್ದಾರೆ. ಇದರ ನಡುವೆ ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಶಿಂಧೆ ಅವರನ್ನು ವಜಾಗೊಳಿಸಲಾಗಿದೆ.
ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಆಡಳಿತಾರೂಢ ಮೈತ್ರಿಕೂಟ 10ರ ಪೈಕಿ 6 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದರೆ, 5 ಅಭ್ಯರ್ಥಿಗಳು ಮಾತ್ರ ಜಯಗಳಿಸಿದ್ದಾರೆ. ವಿರೋಧ ಪಕ್ಷದಲ್ಲಿರುವ ಬಿಜೆಪಿ ತಾನು ಸ್ಪರ್ಧಿಸಿದ್ದ ಎಲ್ಲ 5 ಸ್ಥಾನಗಳಲ್ಲೂ ಗೆಲುವು ಸಾಧಿಸಿದೆ. ನಂತರ ನಡೆದ ಬೆಳವಣಿಗೆಯಲ್ಲಿ ಏಕನಾಥ್ ಶಿಂಧೆ ಶಾಸಕರನ್ನು ಕಟ್ಟಿಕೊಂಡು ಗುಜರಾತ್ ಗೆ ಹಾರಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಮತ್ತು ಶಿವಸೇನೆಯ ಸಂಪರ್ಕಕ್ಕೆ ಸಿಗದೇ ಹೋಗಿರುವ ಏಕನಾಥ್ ಶಿಂಧೆ ‘ನಾವು ಬಾಳಾಸಾಹೇಬರ ಕಟ್ಟಾ ಶಿವಸೈನಿಕರು. ಬಾಳಾಸಾಹೇಬರು ನಮಗೆ ಹಿಂದುತ್ವವನ್ನು ಕಲಿಸಿದ್ದಾರೆ. ಅಧಿಕಾರಕ್ಕಾಗಿ ನಾವು ಬಾಳಾಸಾಹೇಬ್ ಆಲೋಚನೆಗಳು ಮತ್ತು ಆನಂದ್ ದಿಘೆ ಸಾಹೇಬ್ ಬೋಧನೆಗಳಿಗೆ ಎಂದಿಗೂ ಮೋಸ ಮಾಡಿಲ್ಲ ಮತ್ತು ಮಾಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.










