ಬೆಂಗಳೂರು : ಕೇವಲ 50 ರೂಪಾಯಿಗಾಗಿ ಸ್ನೇಹಿತನನ್ನೇ ಕೊಲೆಗೈದಿರುವ ಘಟನೆ ನಗರದ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುರುಬರಹಳ್ಳಿ ಸರ್ಕಲ್ ಬಳಿ ನಿನ್ನೆ ರಾತ್ರಿ ನಡೆದಿದೆ.
ಶಿವಮಾಧು(24)ಕೊಲೆಯಾದ ಯುವಕ. ಈತನ ಸ್ನೇಹಿತ ಶಾಂತಕುಮಾರ್ ಎಂಬಾತನೇ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕೊಲೆಯಾದ ಶಿವಮಾಧು ಹಾಗೂ ಆರೋಪಿ ಶಾಂತಕುಮಾರ್ ಇಬ್ಬರೂ ಸ್ನೇಹಿತರು. ಚಿಕ್ಕಂದಿನಿಂದ ಆಡಿ ಬೆಳೆದವರು. ಕುರಬರಹಳ್ಳಿ ಸರ್ಕಲ್ ಬಳಿಯಿಂದ ಕೆಲ ವರ್ಷಗಳ ಹಿಂದೆ ಲಗ್ಗೆರೆ ಬ್ರಿಡ್ಜ್ ಸಮೀಪ ಶಿಫ್ಟ್ ಆಗಿದ್ದರು. ಆದರೂ ಹಳೆ ಅಡ್ಡ ಕುರುಬರಹಳ್ಳಿ ಕಡೆ ಆಗಾಗ ಬರುತ್ತಿದ್ದರು. ಆರೋಪಿ ಜೊಮ್ಯಾಟೋ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ, ಮೃತ ಶಿವಮಾಧು ಆಟೋ ಚಾಲಕನಾಗಿದ್ದ.
ನಿನ್ನೆ ಸಹ ಕುರುಬರಹಳ್ಳಿ ಸರ್ಕಲ್ ಕಡೆ ಬಂದಿದ್ದ ಶಿವಮಾಧು, ಶಾಂತಕುಮಾರ್ ಮತ್ತು ಸ್ನೇಹಿತರು ಹತ್ತಿರದ ಮೈದಾನವೊಂದರಲ್ಲಿ ಕ್ರಿಕೆಟ್ ಆಡಲು ಹೋಗಿದ್ದಾರೆ. ಕ್ರಿಕೆಟ್ ಆಡಿ ಬಂದವರೇ ಏನೋ ಕೆಲಸಕ್ಕೆಂದು ರಾತ್ರಿ 8.30ರ ಸುಮಾರಿಗೆ ಸರ್ಕಲ್ ಬಳಿಯಿರುವ ಸೈಬರ್ ಸೆಂಟರ್ವೊಂದಕ್ಕೆ ಹೋಗಿದ್ದರು. ಈ ವೇಳೆ ಶಾಂತಕುಮಾರ್ ಜೇಬಿನಿಂದ ಶಿವಮಾಧು 50 ರೂಪಾಯಿ ತೆಗೆದುಕೊಂಡಿದ್ದಾನೆ. ಆಗ ಯಾಕೆ ತೆಗೆದುಕೊಂಡೆ, ಅದನ್ನು ಕೊಡು ಅಂತಾ ಶಾಂತಕುಮಾರ್ ಕೇಳಿದ್ದಾನೆ. ಆಗ ಶಿವಮಾಧು ಕೊಡಲ್ಲ ಏನಿವಾಗ ಎಂದು ಹೇಳಿದ್ದಾನೆ.
ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿದ್ದು, ಜೊತೆಯಲ್ಲೇ ತಂದಿದ್ದ ಚಾಕು ತೆಗೆದುಕೊಂಡು ಆರೋಪಿ ಶಾಂತಕುಮಾರ್, ಶಿವಮಾಧು ಎದೆಗೆ ಚುಚ್ಚಿ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ಶಿವಮಾಧುನನ್ನು ಸ್ನೇಹಿತರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರೂ ಆತ ಸಾವನ್ನಪ್ಪಿದ್ದಾನೆ. ಬಳಿಕ ಘಟನಾ ಸ್ಥಳಕ್ಕೆ ಬಂದ ಬಸವೇಶ್ವರ ನಗರ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.










