ಬೆಂಗಳೂರು : ಗೃಹಪ್ರವೇಶದ ವೇಳೆ ಮನೆಗೆ ನುಗ್ಗಿದ ಮಂಗಳಮುಖಿಯರ ಗ್ಯಾಂಗ್ ವೊಂದು 25 ಸಾವಿರ ಕೊಡುವಂತೆ ಮನೆ ಮಾಲೀಕನಿಗೆ ಆವಾಜ್ ಹಾಕಿ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ನಿನ್ನೆ ನಗರದ ಕಲ್ಕರೆಯ ಚೆನ್ನಸಂದ್ರದಲ್ಲಿ ಲೋಕೇಶ್ ಎಂಬುವರು ತಮ್ಮ ಮನೆಯ ಗೃಹ ಪ್ರವೇಶ ಪೂಜೆಯನ್ನು ನೆರವೇರಿಸುತ್ತಿದ್ದರು. ಈ ವೇಳೆ ಮನೆಗೆ ನುಗ್ಗಿದ ಮಂಗಳಮುಖಿಯರು ದಾಂಧಲೆ ನಡೆಸಿದ್ದಾರೆ. 25 ಸಾವಿರ ನೀಡುವಂತೆ ತಗಾದೆ ತೆಗೆದಿದ್ದಾರೆ. 2,500 ಸಾವಿರ ಕೊಡ್ತಿವಿ ತೆಗೆದುಕೊಂಡು, ಊಟ ಮಾಡಿ ಹೋಗಿ ಎಂದು ಮನೆ ಮಾಲೀಕರು ಹೇಳಿದ್ದಕ್ಕೆ ಮನೆಯವರಿಗೆಲ್ಲಾ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಂಗಳಮುಖಿಯರು ಅಸಭ್ಯವಾಗಿ ವರ್ತಿಸಿದ್ದಾರೆ. ಈ ವೇಳೆ ಮನೆ ಮಾಲೀಕರ ಮೇಲೆ ಮಂಗಳಮುಖಿಯರು ಹಲ್ಲೆ ನಡೆಸಿದ್ದಾರೆ.
ಮಂಗಳಮುಖಿಯರ ಧಮ್ಕಿಗೆ ಬಗ್ಗದ ಮೆನೆಯವರೆಲ್ಲಾ ಒಂದಾಗಿ ಅವರನ್ನು ಎದುರಿಸಿದ್ದಾರೆ. ಪೊಲೀಸರನ್ನು ಕರೆಸುವುದಾಗಿ ಎಚ್ಚರಿಸಿದ್ದಾರೆ. ಇದಾದ ಬಳಿಕ ಮಂಗಳಮುಖಿಯರು ಎರಡು ಆಟೋದಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದೀಗ ಈ ಬಗ್ಗೆ ಲೋಕೇಶ್ ಅವರು ದೂರು ದಾಖಲಿಸಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಗೃಹ ಪ್ರವೇಶದ ವೇಳೆ ಮಂಗಳಮುಖಿಯರ ದಾಂಧಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಂಗಳ ಮುಖಿಯರ ನಡೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.










