ಚಿಕ್ಕಮಗಳೂರು : ಮೀನುಗಳ ಕಳ್ಳತನ ತಡೆಗಟ್ಟುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ…

88
firstsuddi

ಚಿಕ್ಕಮಗಳೂರು : ಮೀನುಗಾರಿಕೆ ಇಲಾಖೆಯಿಂದ ನೇರ ಗುತ್ತಿಗೆ ಮತ್ತು ಹರಾಜಾಗಿರುವ ಕೆರೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಮೀನುಗಳ ಕಳ್ಳತನವನ್ನು ತಡೆಗಟ್ಟುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪೋಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಮತ್ತು ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿ ಎಂ.ಹೆಚ್.ಅಕ್ಷಯ್ ಅವರನ್ನು ಇಂದು ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಮತ್ತು ಮೀನುಗಾರರು ಈ ಸಂಬಂಧ ಮನವಿ ಸಲ್ಲಿಸಿದರು.

ಮೀನುಗಾರಿಕೆ ಇಲಾಖೆಯಿಂದ ಮೀನು ಸಾಕಾಣಿಕೆಗಾಗಿ ಪ.ಜಾತಿ/ಪ.ವರ್ಗದ ಮೀನುಗಾರರ ಸಂಘಗಳು ಹಾಗೂ ಇನ್ನಿತರ ಸಂಘಗಳಿಗೆ ಮೀನುಗಾರರಿಗೆ ಕೆರೆಗಳನ್ನು ನೇರ ಗುತ್ತಿಗೆ ಮತ್ತು ಹರಾಜು ಮಾಡಲಾಗಿದೆ ಎಂದರು.

ಈ ಕೆರೆಗಳಲ್ಲಿ ಮೀನುಗಳು ಪ್ರೌಢಾವಸ್ಥೆಗೆ ಬಂದ ಸಮಯದಲ್ಲಿ ಅವುಗಳನ್ನು ಕದ್ದು ಹಿಡಿಯಲಾಗುತ್ತಿದೆ ಇದರಿಂದಾಗಿ ಕೆರೆಗಳನ್ನೇ ನಂಬಿ ಬದುಕುತ್ತಿರುವ ಸಂಘಗಳು ಮತ್ತು ಮೀನುಗಾರರು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ ಎಂದು ದೂರಿದರು.

ಮೀನುಗಳನ್ನು ಕದ್ದು ಹಿಡಿಯುವ ವೇಳೆ ಮೀನುಗಾರರು ಮತ್ತು ಮೀನು ಹಿಡಿಯುವವರ ನಡುವೆ ಅನೇಕ ಬಾರಿ ಗಲಾಟೆಯಾಗಿ ಪೋಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿವೆ ಎಂದು ಹೇಳಿದರು.

ಕೆರೆ ಹರಾಜು ಅಥವಾ ನೇರ ಗುತ್ತಿಗೆ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಇಲ್ಲದಿರುವುದರಿಂದಾಗಿ ಮೀನುಗಳ ಕಳ್ಳತನ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ಇತ್ತೀಚೆಗೆ ಆನ್‍ಲೈನ್ ಮೂಲಕ ಕೆರೆಗಳ ಹರಾಜು ಪ್ರಕ್ರಿಯೆ ಆರಂಭಿಸಿದ್ದು, ಇದರಿಂದಾಗಿ ಅನಕ್ಷರಸ್ಥ ಮೀನುಗಾರರಿಗೆ ಅರ್ಜಿ ಹಾಕಲು ಸಾಧ್ಯವಾಗದೇ ಕೆರೆಗಳು ಬಂಡವಾಳ ಶಾಹಿಗಳ ಪಾಲಾಗುತ್ತಿವೆ ಎಂದು ಅಳಲು ತೋಡಿಕೊಂಡ ಮೀನುಗಾರರು ಈ ಹಿನ್ನೆಲೆಯಲ್ಲಿ ಆನ್‍ಲೈನ್ ಹರಾಜು ಪ್ರಕ್ರಿಯೆಯನ್ನು ನಿಲ್ಲಿಸಿ ಹಿಂದಿನಂತೆಯೆ ಹರಾಜು ಹಾಕಬೇಕು ಎಂದು ಒತ್ತಾಯಿಸಿದರು.

ಮೀನುಗಾರರ ಮನೆ ನಿರ್ಮಾಣಕ್ಕೆ ನೀಡಲಾಗುವ ಸಬ್ಸಿಡಿಯನ್ನು 1.80 ಲಕ್ಷದಿಂದ 5 ಲಕ್ಷ ರೂಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಕೆ.ವಸಂತಕುಮಾರ್, ಜಿಲ್ಲಾ ಸಂಚಾಲಕ ಬಿ.ಎನ್.ಚೌಡಪ್ಪ, ಸಂಘಟನಾ ಸಂಚಾಲಕರಾದ ಹೆಚ್.ಇ.ದೊಡ್ಡಯ್ಯ, ಇಲಿಯಾಜ್ ಅಹಮದ್, ಶ್ರೀ ಗಂಗಾ ಪ.ಜಾತಿ/ಪ.ವರ್ಗ ಮೀನುಗಾರರ ಸಂಘದ ಅಧ್ಯಕ್ಷ ವಿ.ಧಮೇಶ್, ವಿಜಯಕುಮಾರ್, ವಿ.ಚೇತನ್. ಹೆಚ್.ಆರ್.ಲೋಕೇಶ್, ಹೆಚ್.ಕೆ.ದೇವರಾಜ್, ಕೆ.ಮಂಜುನಾಥ್, ಜಯರಾಮ್ ಮಾಸ್ಟರ್, ಸುರೇಶ್, ಚಾಂದ್ ಬಾಷಾ ಹಾಜರಿದ್ದರು.