ಟೋಕಿಯೋ : ದುಷ್ಕರ್ಮಿಯೊಬ್ಬನ ಗುಂಡೇಟಿಗೆ ಗಂಭೀರವಾಗಿ ಗಾಯಗೊಂಡಿದ್ದ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ(67) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಶಿಂಜೋ ನಾರಾ ನಗರದಲ್ಲಿ ಇಂದು ಬೆಳಗ್ಗೆ 11.30ರ (ಜಪಾನ್ ಕಾಲಮಾನ) ಸುಮಾರಿಗೆ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಅವರ ಮೇಲೆ ಗುಂಡು ಹಾರಿಸಿದ್ದ. ತಕ್ಷಣ ಕುಸಿದುಬಿದ್ದ ಅಬೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಶಿಂಜೋ ಅವರ ಮೇಲೆ ಎರಡು ಬಾರಿ ಗುಂಡು ಹಾರಿಸಲಾಗಿದೆ. ಎರಡನೇ ಗುಂಡು ಹಿಂಬದಿಯಿಂದ ದೇಹ ಹೊಕ್ಕಿದ್ದು, ಅದರಿಂದ ಅವರು ಕುಸಿದು ಬಿದ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಾಳಿ ನಡೆಸಿದ ದುಷ್ಕರ್ಮಿಯನ್ನು ನಾರಾ ಪಟ್ಟಣದ ರಹಿವಾಸಿ ಯಾಮಾಗಮಿ ಟೆಟ್ಸುಯಾ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ.
ಶಿಂಜೋ ಅವರು ಭಾರತದ ಜೊತೆ ಉತ್ತಮ ಒಡನಾಟವನ್ನು ಇಟ್ಟುಕೊಂಡಿದ್ದರು. ಶಿಂಜೋ ಅವರ ನಿಧನಕ್ಕೆ ವಿಶ್ವದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.










