ಮನಕಲಕುವ ಘಟನೆ… ತಮ್ಮನ ಶವವನ್ನು ಮಡಿಲಲ್ಲಿಟ್ಟುಕೊಂಡು ರಸ್ತೆಬದಿ ಕುಳಿತ 8ರ ಬಾಲಕ…

41
firstsuddi

ಭೋಪಾಲ್ : ಎಂಟು ವರ್ಷದ ಬಾಲಕ ತನ್ನ ಎರಡು ವರ್ಷದ ಕಿರಿಯ ಸಹೋದರನ ಶವವನ್ನು ಮಡಿಲ ಮೇಲೆ ಮಲಗಿಸಿಕೊಂಡು ರಸ್ತೆಬದಿಯಲ್ಲಿ ಕುಳಿತಿದ್ದ ಮನಕಲಕುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಬದ್ಫ್ರಾ ಗ್ರಾಮದ ನಿವಾಸಿ ಪೂಜಾರಾಮ್ ಜಾತವ್ ಎಂಬುವವರ ಎರಡು ವರ್ಷದ ಮಗ ರಾಜಾ ರಕ್ತಹೀನತೆ ಮತ್ತು ಹೊಟ್ಟೆನೋವಿನಿಂದ ಬಳಲುತ್ತಿದ್ದ. ಹೀಗಾಗಿ ಚಿಕಿತ್ಸೆಗೆಂದು ಆಂಬುಲೆನ್ಸ್ ನಲ್ಲಿ ಭೋಪಾಲ್ ನಿಂದ ಉತ್ತರಕ್ಕೆ 450 ಕಿಮೀ ದೂರದಲ್ಲಿರುವ ಮೊರೆನಾ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದರು. ರಾಜಾ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾನೆ. ಆದರೆ ಅವರನ್ನು ಕರೆತಂದಿದ್ದ ಆಂಬ್ಯುಲೆನ್ಸ್ ಆಗಲೇ ಹಿಂತಿರುಗಿತ್ತು.

ನಂತರ ಮಗುವಿನ ಶವವನ್ನು ಗ್ರಾಮಕ್ಕೆ ಕೊಂಡೊಯ್ಯಲು ಪೂಜಾರಾಮ್ ಅವರು ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಅಂಬುಲೆನ್ಸ್ ನೀಡಲು ಆಸ್ಪತ್ರೆ ಅಧಿಕಾರಿಗಳು ತಿರಸ್ಕರಿಸದ್ದಾರೆ. ಇದರಿಂದ ಅಸಹಾಯಕರಾದ ಪೂಜಾರಾಮ್ ಆಸ್ಪತ್ರೆ ಆವರಣದಲ್ಲಿ ನಿಂತಿದ್ದ ಆ್ಯಂಬುಲೆನ್ಸ್ವೊಂದನ್ನು ಬಾಡಿಗೆಗೆ ಕೇಳಿದ್ದಾರೆ. ಮೃತದೇಹ ಸಾಗಿಸಲು ಒಂದೂವರೆ ಸಾವಿರ ರೂಪಾಯಿ ಆಗುತ್ತದೆ ಎಂದು ಆ್ಯಂಬುಲೆನ್ಸ್ನವರು ಹೇಳಿದ್ದಾರೆ. ಆದರೆ, ಪೂಜಾರಾಮ್ ಬಳಿ ಅಷ್ಟು ಹಣ ಇರಲಿಲ್ಲ.

ಆ್ಯಂಬುಲೆನ್ಸ್ ನವರು ಕೇಳಿದಷ್ಟು ಹಣವಿರದ ಕಾರಣಕ್ಕೆ ಬೇರೆ ಯಾವುದಾದರೂ ವಾಹನ ಸಿಗಬಹುದೇನು ಎಂದು ತಿಳಿದು ಪೂಜಾರಾಮ್ ತಮ್ಮ ಮಗನ ಶವವನ್ನು ಆಸ್ಪತ್ರೆಯ ಹೊರಗೆ ತೆಗೆದುಕೊಂಡು ಬಂದಿದ್ದಾರೆ. ಆಸ್ಪತ್ರೆಯ ಹೊರಗೂ ವಾಹನ ಸಿಗದ ಹಿನ್ನೆಲೆಯಲ್ಲಿ ಪೂಜಾರಾಮ್ ತಮ್ಮ ಇನ್ನೊಬ್ಬ 8 ವರ್ಷದ ಮಗ ಗುಲ್ಶನ್ ನನ್ನು ಇಲ್ಲಿನ ಪಾರ್ಕ್ ಮುಂಭಾಗದ ರಸ್ತೆ ಬದಿಯಲ್ಲಿ ಕೂರಿಸಿ, 2 ವರ್ಷದ ಮಗುವಿನ ಶವವನ್ನು ಮಡಿಲಲ್ಲಿಟ್ಟು, ಕಡಿಮೆ ದರದಲ್ಲಿ ವಾಹನ ಹುಡುಕಲು ತೆರಳಿದ್ದಾರೆ.

ಆದರೆ, ತಂದೆ ಸುಮಾರು ಹೊತ್ತು ಹುಡುಕಿದರೂ ಕಡಿಮೆ ದರದಲ್ಲಿ ವಾಹನ ಸಿಗದ ಕಾರಣ ತಮ್ಮನ ಶವವನ್ನು ಮಡಿಲಲ್ಲಿ ಹೊತ್ತುಕೊಂಡು ಹಲವು ಗಂಟೆಗಳ ಕಾಲ ಅಣ್ಣ ಗುಲ್ಶನ್ ಕುಳಿತಿದ್ದ. ರಸ್ತೆಯಲ್ಲಿ ಕುಳಿತು ತಂದೆ ವಾಪಸ್ ಬರುವುದನ್ನೇ ಎದುರು ನೋಡುತ್ತಿದ್ದ. ಅಲ್ಲದೇ, ಒಮ್ಮೆ ಕಣ್ಣೀರು ಹಾಕುತ್ತ, ಕೆಲವೊಮ್ಮೆ ತಮ್ಮನ ದೇಹವನ್ನು ನೋಡಿ ಮುದ್ದಿಸುತ್ತ ಕುಳಿತಿದ್ದ. ಈ ವೇಳೆ ಬಾಲಕನನ್ನು ಗಮನಿಸಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಕೊತ್ವಾಲಿ ಠಾಣೆಯ ಪೊಲೀಸ್ ಅಧಿಕಾರಿ ಯೋಗೇಂದ್ರ ಸಿಂಗ್ ಸ್ಥಳಕ್ಕೆ ಆಗಮಿಸಿದ್ದು, ಗುಲ್ಶನ್ ಮಡಿಲಿಂದ ಮೃತ ದೇಹವನ್ನು ಎತ್ತಿಕೊಂಡು, ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಯೊಳಗೆ ಕರೆದೊಯ್ದಿದ್ದಾರೆ. ಇದಾದ ನಂತರ ಪೂಜಾರಾಮ್ ಕೂಡ ಆಗಮಿಸಿದ್ದು, ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಎರಡು ವರ್ಷದ ಬಾಲಕನ ಮೃತದೇಹವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗಿದೆ.