ಉಡುಪಿ : ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಓಟಗಾರ ಶ್ರೀನಿವಾಸ ಗೌಡ ವಿರುದ್ಧ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಬಳ ಓಟಗಾರ ಶ್ರೀನಿವಾಸ ಗೌಡ, ಕಂಬಳ ಹಿರಿಯ ತೀರ್ಪುಗಾರ ಗುಣಪಾಲ ಕಡಂಬ ಮತ್ತು ಲೇಸರ್ ಬೀಮ್ ಮೂಲಕ ಕಂಬಳದ ಫಲಿತಾಂಶ ಘೋಷಿಸುವ ಸ್ಕೈ ವೀವ್ ಮಾಲೀಕ ರತ್ನಾಕರ ಎಂಬುವವರ ವಿರುದ್ಧ ಕಂಬಳ ಕೋಣಗಳ ಯಜಮಾನ ಲೋಕೇಶ್ ಶೆಟ್ಟಿ ಮುಚ್ಚೂರು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉಸೇನ್ ಬೋಲ್ಟ್ ದಾಖಲೆ ಉಡೀಸ್ ಅಂತಾ ನಕಲಿ ದಾಖಲೆ ಸೃಷ್ಠಿಸಲಾಗಿದೆ. ಇದನ್ನೇ ನೆಪವಾಗಿ ಸಾರ್ವಜನಿಕ ಹಾಗೂ ಸರ್ಕಾರದ ಹಣ ವಂಚಿಸಲಾಗಿದೆ. ತೀರ್ಪುಗಾರ ಗುಣಪಾಲ ಕಡಂಬ ಸ್ವಾರ್ಥ ಸಾಧನೆಗೆ ಕಂಬಳ ದುರುಪಯೋಗ ಮಾಡಿದ್ದಾರೆ. ಲಾಭಕ್ಕಾಗಿ ಜಿಲ್ಲಾ ಕಂಬಳ ಸಮಿತಿಯಲ್ಲಿ ಆಕ್ರಮ ಪ್ರವೇಶ ಮಾಡಿದ್ದಾರೆ. ಕಂಬಳ ಕೂಟದ ಸಭೆಗಳಲ್ಲಿ ಮೈಕ್ ಹಿಡಿದು ತಾನೋರ್ವ ಮಹಾಸಾಧಕ, ನನ್ನಿಂದಲೇ ಕಂಬಳ ಉಳಿದಿದೆ ಎಂದು ಸಾರ್ವಜನಿಕರಲ್ಲಿ ಬಿಂಬಿಸಿ ಇದನ್ನು ತಮ್ಮ ಸ್ವಾರ್ಥ ಸಾಧನೆಗೆ ಬಳಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೂಡಬಿದಿರೆಯ ಶ್ರೀನಿವಾಸ ಗೌಡ 2020ರಲ್ಲಿ ನಡೆದ ಐಕಳ ಕಂಬಳದಲ್ಲಿ100 ಮೀಟರ್ ದೂರವನ್ನು 9.55 ಸೆಕೆಂಡ್ ನಲ್ಲಿ ಕ್ರಮಿಸಿದ್ದರು. ಇದು 2009ರಲ್ಲಿ ಉಸೇನ್ ಬೋಲ್ಟ್ ಅವರ 100 ಮೀಟರ್ ನ್ನು 9.58 ಸೆಕೆಂಡ್ ನಲ್ಲಿ ಕ್ರಮಿಸಿದ ದಾಖಲೆಯನ್ನು ಮೀರಿಸಿತ್ತು.










