ಪ್ರೇಯಸಿ ಕೊಂದು ನೇಣಿಗೆ ಶರಣಾದ ಭಗ್ನ ಪ್ರೇಮಿ.

71
firstsuddi

ಬೆಳಗಾವಿ : ಯುವಕನೋರ್ವ ಪ್ರೇಯಸಿಯ ಕತ್ತು ಹಿಸುಕಿ ಕೊಂದು ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವ ಕಾಲೋನಿಯಲ್ಲಿ ನಡೆದಿದೆ.

ಜಿಲ್ಲೆಯ ಸವದತ್ತಿ ತಾಲೂಕಿನ ಮದ್ಲೂರು ಗ್ರಾಮದ ರೇಣುಕಾ ಎಂಬುವಳನ್ನು ಬೂದಿಗೊಪ್ಪ ಗ್ರಾಮದ ರಾಮಚಂದ್ರ ತೆಣಗಿ (29) ಎಂಬಾತ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ರೇಣುಕಾ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತ ರಾಮಚಂದ್ರ ತೆಣಗಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಉನ್ನತ ಪದವಿ ವ್ಯಾಸಂಗ ಮಾಡುತ್ತಿದ್ದ.

ರೇಣುಕಾ ಬಾಡಿಗೆ ಮನೆಯಲ್ಲಿ ವಾಸವಿದ್ದರು. ನಿನ್ನೆ ತಡರಾತ್ರಿ ಮನೆಗೆ ಬಂದಿದ್ದ ಪ್ರಿಯಕರ ರಾಮಚಂದ್ರ ರೇಣುಕಾರನ್ನು ಸ್ಕಿಪ್ಪಿಂಗ್ ವೈರ್ ನಿಂದ ಕತ್ತು ಬಿಗಿದು ಕೊಲೆ ಮಾಡಿ, ಬಳಿಕ ಅದೇ ವೈರ್ ಅನ್ನು ಫ್ಯಾನ್ ಗೆ ಕಟ್ಟಿಕೊಂಡು ನೇಣಿಗೆ ಶರಣಾಗಿದ್ದಾನೆ. ರಾಮಚಂದ್ರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತನ್ನ ಸಂಬಂಧಿಯೊಬ್ಬರಿಗೆ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿದ್ದನಂತೆ. ಪ್ರೇಯಸಿ ಮೋಸ ಮಾಡಿರುವುದೇ ಕೊಲೆಗೆ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿ, ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.