ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ಬಣಕ್ಕೆ ನೋಟಿಸ್ ನೀಡಿದ ಚುನಾವಣಾ ಆಯೋಗ.

63
firstsuddi

ಮುಂಬೈ : ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಅವರಿಗೆ ಕೇಂದ್ರ ಚುನಾವಣಾ ಆಯೋಗವು ನೋಟಿಸ್ ನೀಡಿದೆ.

ಶಿವಸೇನೆ ಪಕ್ಷವನ್ನು ಯಾರು ನಿಯಂತ್ರಿಸಬೇಕು ಎಂಬ ಬಗ್ಗೆ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳ ನಡುವೆ ನಡೆಯುತ್ತಿರುವ ಕದನವು ಮತ್ತೊಂದು ಹಂತಕ್ಕೆ ತಲುಪಿದೆ. ಶಿವಸೇನೆ ಪಕ್ಷವನ್ನು ಯಾರು ಮುನ್ನಡೆಸುತ್ತಾರೆ ಎಂಬುದನ್ನು ಸಾಬೀತುಪಡಿಸಲು ಇಬ್ಬರೂ ಸಾಕ್ಷಿ ನೀಡಬೇಕು. ಈ ಎಲ್ಲಾ ದಾಖಲೆಗಳನ್ನು ಆಗಸ್ಟ್ 8ರೊಳಗೆ ನೀಡುವಂತೆ ಚುನಾವಣಾ ಆಯೋಗವು ಎರಡೂ ಬಣದವರಿಗೂ ಸೂಚಿಸಿದೆ.

ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಬಂಡಾಯವೆದ್ದಿದ್ದ 40 ಶಾಸಕರು ನಂತರ ತಮ್ಮದು ಪ್ರತ್ಯೇಕ ಬಣ ಎಂದು ಘೋಷಿಸಿಕೊಂಡರು. ಇದೇ ಬಣವು ಬಿಜೆಪಿ ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರವನ್ನೂ ರಚಿಸಿತು. ಚುನಾವಣಾ ಆಯೋಗಕ್ಕೆ ಈ ಸಂಬಂಧ ಪತ್ರವೊಂದನ್ನು ಬರೆದಿದ್ದ ಶಿಂದೆ ಬಣವು, ಮಹಾರಾಷ್ಟ್ರ ವಿಧಾನಸಭೆಯ 55 ಶಿವಸೇನಾ ಶಾಸಕರ ಪೈಕಿ 40 ಮತ್ತು 18 ಲೋಕಸಭಾ ಸದಸ್ಯರ ಪೈಕಿ 12 ಮಂದಿಯ ಬೆಂಬಲ ತಮಗಿದೆ ಎಂದು ಘೋಷಿಸಿಕೊಂಡಿತ್ತು.

ಈ ಬಗ್ಗೆ ಚುನಾವಣಾ ಆಯೋಗ ನೀಡಿರುವ ನೋಟಿಸ್ ನಲ್ಲಿ, ಶಿವಸೇನೆಯಲ್ಲಿ ಒಡಕು ಇರುವುದು ಸ್ಪಷ್ಟವಾಗಿದೆ. ಅದರಲ್ಲಿ ಒಂದು ಗುಂಪನ್ನು ಏಕನಾಥ್ ಶಿಂಧೆ ಮುನ್ನಡೆಸುತ್ತಿದ್ದಾರೆ ಮತ್ತು ಇನ್ನೊಂದು ಗುಂಪನ್ನು ಉದ್ಧವ್ ಠಾಕ್ರೆ ಮುನ್ನಡೆಸುತ್ತಿದ್ದಾರೆ. ಎರಡು ಗುಂಪುಗಳು ತಮ್ಮ ನಾಯಕರಾಗಿರುವ ನಿಜವಾದ ಶಿವಸೇನಾ ಪಕ್ಷದ ಅಧ್ಯಕ್ಷ ಎಂದು ಹೇಳುತ್ತಿದ್ದಾರೆ. ಆದರೆ ಎರಡೂ ಬಣಗಳಿಗೆ ಸೇರಿದವರ ಹಕ್ಕು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಬೇಕಿದೆ. ಇಂಥ ಪ್ರಕರಣಗಳಲ್ಲಿ ಈ ಹಿಂದೆ ನಡೆಸಿದ್ದ ಪ್ರಕ್ರಿಯೆಗಳನ್ನು ಗಮನಿಸಿ, ಚುನಾವಣಾ ಆಯೋಗವು ಎರಡೂ ಬಣಗಳಿಗೆ ಲಿಖಿತ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ.