ದೆಹಲಿ ರೈಲ್ವೆ ನಿಲ್ದಾಣದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ…

72
firstsuddi

ನವದೆಹಲಿ : ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ 30 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ನಾಲ್ವರು ಆರೋಪಿಗಳು ರೈಲ್ವೆಯ ಎಲೆಕ್ಟ್ರಿಕಲ್ ವಿಭಾಗದ ಉದ್ಯೋಗಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸತೀಶ್ ಕುಮಾರ್ (35), ವಿನೋದ್ ಕುಮಾರ್ (38), ಮಂಗಲ್ ಚಂದ್ ಮೀನಾ (33) ಮತ್ತು ಜಗದೀಶ್ ಚಂದ್ (37) ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣ ಸಂಬಂಧ ಎಫ್ ಐಆರ್ ದಾಖಲಾದ ಎರಡು ಗಂಟೆಯೊಳಗೆ ನಾಲ್ವರು ಆರೋಪಿಗಳನ್ನು ಬಂಧಿಸಿ, ದೆಹಲಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಾಗಿದೆ ಮತ್ತು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಡಿಸಿಪಿ (ರೈಲ್ವೇ) ಹರೇಂದ್ರ ಸಿಂಗ್ ತಿಳಿಸಿದ್ದಾರೆ.

ಮಹಿಳೆ ಹರಿಯಾಣದ ಫರಿದಾಬಾದ್ ನಲ್ಲಿ ವಾಸಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ಪತಿಯಿಂದ ಬೇರ್ಪಟ್ಟು ಕೆಲಸ ಅರಸಿ ದೆಹಲಿಗೆ ಬಂದಿದ್ದರು. ಈ ವೇಳೆ ಸ್ನೇಹಿತನ ಮೂಲಕ ಮಹಿಳೆಗೆ ಆರೋಪಿಗಳಲ್ಲಿ ಓರ್ವನ ಪರಿಚಯವಾಗಿತ್ತು. ತಾನು ರೈಲ್ವೇ ಉದ್ಯೋಗಿಯಾಗಿದ್ದು ಮಹಿಳೆಗೂ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದ. ಜುಲೈ 21 ರಂದು ಆಕೆಗೆ ಕರೆ ಮಾಡಿ ತನ್ನ ಮಗನ ಹುಟ್ಟುಹಬ್ಬದ ಜೊತೆಗೆ ಹೊಸ ಮನೆ ಖರೀಸುತ್ತಿರುವ ಪ್ರಯುಕ್ತ ಔತಣಕೂಟಕ್ಕೆ ಮನೆಗೆ ಆಹ್ವಾನಿಸಿದ್ದನು.

ನಂತರ ಮಹಿಳೆಯನ್ನು ಕೀರ್ತಿ ನಗರ ಮೆಟ್ರೋ ನಿಲ್ದಾಣದಿಂದ ರಾತ್ರಿ 10:30ರ ಸುಮಾರಿಗೆ ಕರೆದುಕೊಂಡು ರೈಲ್ವೇ ನಿಲ್ದಾಣಕ್ಕೆ ಹೋದನು. ಬಳಿಕ ಕೊಠಡಿಯೊಂದರಲ್ಲಿ ಕುಳಿತುಕೊಳ್ಳಲು ತಿಳಿಸಿ ಹೊರಗೆ ಹೋಗಿದ್ದ ಆರೋಪಿ, ನಂತರ ತನ್ನ ಸ್ನೇಹಿತನೊಂದಿಗೆ ಆಗಮಿಸಿ ಕೊಠಡಿಯ ಬಾಗಿಲ ಚಿಲಕ ಹಾಕಿ ಒಬ್ಬರ ನಂತರ ಒಬ್ಬರು ಅತ್ಯಾಚಾರವೆಸಗಿದ್ದಾರೆ ಮತ್ತು ಇನ್ನಿಬ್ಬರು ಸಿಬ್ಬಂದಿ ಕೊಠಡಿಯ ಹೊರಗೆ ಕಾವಲು ಕಾಯುವ ಮೂಲಕ ಕೃತ್ಯಕ್ಕೆ ಸಹಕಾರ ನೀಡಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ಹೇಳಿದ್ದಾಳೆ.