ಬ್ರಿಟನ್ ಪ್ರಧಾನಿಯಾದರೆ ಚೀನಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ : ರಿಷಿ ಸುನಕ್.

68
firstsuddi

ಲಂಡನ್ : ಬ್ರಿಟನ್ ನ ಮುಂದಿನ ಪ್ರಧಾನ ಮಂತ್ರಿಯಾದಲ್ಲಿ ಚೀನಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅಳಿಯ ಹಾಗೂ ಬ್ರಿಟನ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಅವರು ತಿಳಿಸಿದ್ದಾರೆ.

ಬ್ರಿಟನ್ ಪ್ರಧಾನಿ ಹುದ್ದೆಗೆ ನಡೆಯುತ್ತಿರುವ ಚುನಾವಣೆಯ ಕೊನೆಯ ಎರಡು ಹಂತಗಳಲ್ಲಿ ಅಧಿಕಾರಾರೂಢ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿ ಲಿಜ್ ಟ್ರಸ್ ಮುನ್ನಡೆ ಸಾಧಿಸಿದ್ದಾರೆ. ರಿಷಿ ಸುನಕ್ ಚೀನಾ ಹಾಗೂ ರಷ್ಯಾ ಬಗ್ಗೆ ಮೃದು ನಿಲುವು ಹೊಂದಿದ್ದಾರೆ ಎಂದು ಟ್ರಸ್ ಆರೋಪಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ರಿಷಿ ಸುನಕ್ ಬ್ರಿಟನ್ ನಲ್ಲಿರುವ ಎಲ್ಲಾ 30 ಚೀನಾದ ಸಂಸ್ಥೆಗಳನ್ನು ಮುಚ್ಚುತ್ತೇವೆ. ಆ ಮೂಲಕ ಚೀನಿ ಸಂಸ್ಕೃತಿ ಹಾಗೂ ಭಾಷಾ ಪ್ರಭಾವ ಹರಡುವುದನ್ನು ತಡೆಯುತ್ತೇವೆ ಎಂದರು.

ಚೀನಾ ನಮ್ಮ ತಂತ್ರಜ್ಞಾನವನ್ನು ಕದಿಯುತ್ತಿದೆ ಮತ್ತು ನಮ್ಮ ವಿಶ್ವವಿದ್ಯಾನಿಲಯಗಳನ್ನು ವಶಪಡಿಸಿಕೊಳ್ಳುತ್ತಿದೆ ರಷ್ಯಾದ ತೈಲವನ್ನು ಖರೀದಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಲಾದಿಮಿರ್ ಪುಟಿನ್ ಅವರನ್ನು ಮೇಲಕ್ಕೆತ್ತಲು ನೋಡುತ್ತಿದೆ. ತೈವಾನ್ ಸೇರಿದಂತೆ ನೆರೆಹೊರೆ ರಾಷ್ಟ್ರಗಳನ್ನು ಬೆದರಿಸಲು ಚೀನಾ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಚೀನಾದ ಬೇಹುಗಾರಿಕೆಯನ್ನು ತಡೆಗಟ್ಟಲು ಬ್ರಿಟನ್ ನ ಆಂತರಿಕ ಗುಪ್ತಚರ ಸಂಸ್ಥೆ MI5 ನೆರವು ಪಡೆಯುವುದು, ಸೈಬರ್ ಕ್ಷೇತ್ರದಲ್ಲಿ ಚೀನಾದಿಂದ ಸಂಭಾವ್ಯ ದಾಳಿಗಳನ್ನು ಎದುರಿಸಲು ನ್ಯಾಟೊ ಮಾದರಿಯ ಅಂತಾರಾಷ್ಟ್ರೀಯ ಸಹಕಾರ ಒಕ್ಕೂಟ ಸ್ಥಾಪಿಸುವುದು ಇವೇ ಮುಂತಾದ ಕ್ರಮಗಳನ್ನು ತಾವು ಕೈಗೊಳ್ಳುವುದಾಗಿ ಸುನಕ್ ಇಂಗಿತ ವ್ಯಕ್ತಪಡಿಸಿದ್ದಾರೆ.