ಕಾರ್ಗಿಲ್ ವಿಜಯ್ ದಿವಸ್ : ಹುತಾತ್ಮ ಯೋಧರಿಗೆ ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಶ್ರದ್ಧಾಂಜಲಿ…

64
firstsuddi

ನವದೆಹಲಿ : ಕಾರ್ಗಿಲ್ ಯುದ್ಧ ನಡೆದು ಇಂದಿಗೆ 23 ವರ್ಷ ಕಳೆದಿದೆ. ಪಾಕಿಸ್ತಾನದ ಸೇನಾ ಪಡೆಗಳನ್ನು ಆಕ್ರಮಿತ ಪ್ರದೇಶಗಳಿಂದ ಹೊರಹಾಕುವ ಮೂಲಕ 1999ರ ಜುಲೈ 26ರಂದು ಯುದ್ಧ ಅಧಿಕೃತವಾಗಿ ಕೊನೆಗೊಂಡಿತ್ತು. ಇದರ ನೆನಪಿಗಾಗಿ ಹಾಗೂ ಯುದ್ಧದಲ್ಲಿ ಭಾಗಿಯಾದ ಭಾರತದ ಸೇನಾನಿಗಳನ್ನು ಸ್ಮರಿಸಿ ಗೌರವಿಸುವ ಹಾಗೂ ಹುತಾತ್ಮರಾದ 527 ಭಾರತೀಯ ವೀರ ಯೋಧರಿಗೆ ನಮನ ಸಲ್ಲಿಸಲು ಪ್ರತಿ ವರ್ಷ ಜುಲೈ 26 ರ ದಿನವನ್ನು ‘ಕಾರ್ಗಿಲ್ ವಿಜಯ್ ದಿವಸ್’ ಎಂದು ಆಚರಿಸಲಾಗುತ್ತಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರರಿಗೆ ಗೌರವ ಸಲ್ಲಿಸಿದರು. ಕಾರ್ಗಿಲ್ ವಿಜಯ್ ದಿವಸ್ ನಮ್ಮ ಸಶಸ್ತ್ರ ಪಡೆಗಳ ಅಸಾಧಾರಣ ಶೌರ್ಯ, ಶಕ್ತಿ ಮತ್ತು ನಿರ್ಣಯದ ಸಂಕೇತವಾಗಿದೆ. ಭಾರತಮಾತೆಯನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಎಲ್ಲ ವೀರ ಯೋಧರಿಗೆ ನಾನು ನಮಿಸುತ್ತೇನೆ. ಅವರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ದೇಶವಾಸಿಗಳೆಲ್ಲರೂ ಸದಾ ಋಣಿಗಳಾಗಿರುತ್ತಾರೆ. ಜೈ ಹಿಂದ್! ಎಂದು ದ್ರೌಪದಿ ಮುರ್ಮು ಟ್ವೀಟ್ ಮಾಡಿದ್ದಾರೆ.

ಕಾರ್ಗಿಲ್ ವಿಜಯ್ ದಿವಸ್ ತಾಯಿ ಭಾರತಾಂಬೆಯ ಹೆಮ್ಮೆ ಮತ್ತು ವೈಭವದ ಸಂಕೇತವಾಗಿದೆ. ಈ ಸಂದರ್ಭದಲ್ಲಿ ಮಾತೃಭೂಮಿಯ ರಕ್ಷಣೆಯಲ್ಲಿ ತಮ್ಮ ಶೌರ್ಯವನ್ನು ಸಾಧಿಸಿದ ದೇಶದ ಎಲ್ಲಾ ವೀರ ಪುತ್ರರಿಗೆ ನನ್ನ ವಂದನೆಗಳು. ಜೈ ಹಿಂದ್! ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಯೋಧರಿಗೆ ಕಾರ್ಗಿಲ್ ವಿಜಯ ದಿವಸದಂದು ಗೌರವಪೂರ್ಣ ನಮನಗಳು. ಹುತಾತ್ಮ ಯೋಧರ ಅಪ್ರತಿಮ ಶೌರ್ಯ, ಸಾಹಸ, ತ್ಯಾಗ, ಬಲಿದಾನಗಳನ್ನು ಈ ದೇಶ ಸದಾ ಸ್ಮರಿಸಲಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು ಮತ್ತು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿದರು.

1999 ರಲ್ಲಿ ನಡೆದ ಯುದ್ಧದಲ್ಲಿ ಪಾಕಿಸ್ತಾನವನ್ನು ಸದೆಬಡಿದು ಭಾರತ ಜುಲೈ 26 ರಂದು ವಿಜಯ ಪತಾಕೆ ಹಾರಿಸಿತ್ತು. ಇದರಲ್ಲಿ ಹಲವಾರು ಯೋಧರು ಹುತಾತ್ಮರಾಗಿದ್ದರು. ಅವರ ನೆನಪಿಗಾಗಿ ನಿರ್ಮಿಸಲಾಗಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಮೂರು ಪಡೆಗಳ ಸೇನಾ ಮುಖ್ಯಸ್ಥರಾದ ಜನರಲ್ ಮನೋಜ್ ಪಾಂಡೆ, ಅಡ್ಮಿರಲ್ ಆರ್. ಹರಿಕುಮಾರ್ ಮತ್ತು ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಪುಷ್ಪ ನಮನ ಸಲ್ಲಿಸಿದರು.