ನವದೆಹಲಿ : ನಾಲ್ವರು ಕಾಂಗ್ರೆಸ್ ಲೋಕಸಭಾ ಸಂಸದರ ಅಮಾನತು ಹಿಂಪಡೆಯಲಾಗಿದೆ.
ಜುಲೈ 25ರಂದು ಸದನದಲ್ಲಿ ಪ್ಲೆಕಾರ್ಡ್ ಹಿಡಿದು ಘೋಷಣೆ ಕೂಗಿದ್ದಕ್ಕೆ ಕಾಂಗ್ರೆಸ್ ಸಂಸದರಾದ ಮಣಿಕಂ ಟ್ಯಾಗೋರ್, ರಮ್ಯಾ ಹರಿದಾಸ್, ಜ್ಯೋತಿಮಣಿ ಮತ್ತು ಟಿಎನ್ ಪ್ರತಾಪ ಅವರನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅಮಾನತುಗೊಳಿಸಿದ್ದರು. ಆದರೆ ಇಂದು ಬಿರ್ಲಾ ಅವರು ಸದನ ಮುಂದುವರಿಯುವ ಮೊದಲು ನಾಯಕರ ಸರ್ವಪಕ್ಷ ಸಭೆಯನ್ನು ಕರೆದಿದ್ದು, ಈ ಸಂದರ್ಭದಲ್ಲಿ ನಾಲ್ವರು ಕಾಂಗ್ರೆಸ್ ಸಂಸದರ ಅಮಾನತನ್ನು ಹಿಂಪಡೆದಿದ್ದಾರೆ.
ಈ ವೇಳೆ ಮಾತನಾಡಿದ ಬಿರ್ಲಾ ಅವರು, ಸಂಸತ್ತು ದೇಶದ ಅತ್ಯುನ್ನತ ಪ್ರಜಾಪ್ರಭುತ್ವ ಸಂಸ್ಥೆಯಾಗಿದೆ. ಇಲ್ಲಿನ ಸಂಸದೀಯ ಸಂಪ್ರದಾಯ ಹಾಗೂ ಘನತೆಯನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ. ಆದರೆ ಸದನದಲ್ಲಿನ ಘಟನೆಗಳಿಂದ ಎಲ್ಲರಿಗೂ ನೋವಾಗಿದೆ. ನನಗೂ ನೋವಾಗಿದೆ. ಮುಂದೆ ಈ ರೀತಿಯ ಘಟನೆ ಆಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.










