ಕೊಪ್ಪಳ : ಅಂಜನಾದ್ರಿ ಬೆಟ್ಟ ಹನುಮನ ಜನ್ಮ ಸ್ಥಳ. ಇದನ್ನು ಸಾವಿರ ಸಾವಿರ ಸಾರಿ ಒತ್ತಿ ಹೇಳುವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಇಂದು ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, ನಮ್ಮೆಲ್ಲರ ಆರಾಧ್ಯ ದೈವ ಅಂಜನಾದ್ರಿಯ ಹನುಮಂತನ ದರ್ಶನಕ್ಕೆ ಆಗಮಿಸಿದ್ದೇವೆ. ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಬಜೆಟ್ ನಲ್ಲಿ 100 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ದೇನೆ. ಅಂಜನಾದ್ರಿಗೆ ಪ್ರತಿವರ್ಷವೂ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸುವುದು ನಮ್ಮ ಕರ್ತವ್ಯ ಎಂದರು.
ಈಗಾಗಲೇ ಸರ್ಕಾರದ ಆದೇಶದೊಂದಿಗೆ ಅಂಜನಾದ್ರಿಗೆ ಬಂದಿದ್ದೇನೆ. ಅಂಜನಾದ್ರಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸುವ ದೊಡ್ಡ ಗುರಿ ನಮ್ಮದಾಗಿದೆ. ಇಲ್ಲಿ ಯಾತ್ರಿಕರಿಗೆ ಆಸ್ಪತ್ರೆ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ನಮ್ಮ ಚಿಂತನೆಯಾಗಿದೆ. ಬೆಟ್ಟಕ್ಕೆ ರೂಪ್ ವೆ ವ್ಯವಸ್ಥೆ ಮಾಡಿ ವಯಸ್ಸಾದವರಿವೂ ಸಹ ಹನುಮಂತನ ದರ್ಶನ ಕಲ್ಪಿಸುವ ಚಿಂತನೆ ಇದೆ. ಬಜೆಟ್ ನಲ್ಲಿ ಜಿಲ್ಲೆಗೆ ನೀಡಿದ ಅನುದಾನದ ಕಾಮಗಾರಿಗಳಿಗೆ ಚಾಲನೆ ಕೊಡಲು ಬಂದಿದ್ದೇನೆ ಎಂದು ಹೇಳಿದರು.
ಅಂಜನಾದ್ರಿಯಲ್ಲಿ ರೂಪ್ ವೇಗೆ ಮುಂದಿನ ಮುಂದಿನ ದಿನಗಳಲ್ಲಿ ಟೆಂಡರ್ ಕರೆಯಲು ಸೂಚನೆ ನೀಡಿದ್ದೇನೆ. ಅಂಜನಾದ್ರಿಯ ಜೊತೆಗೆ ಸುತ್ತಲಿನ ಪ್ರದೇಶಗಳನ್ನು ಅಭಿವೃದ್ಧಿ ಮಾಡಲಾಗುವುದು. ಬಜೆಟ್ ನಲ್ಲಿ ಘೋಷಿಸಿದಂತೆ ಅಂತಾರಾಷ್ಟ್ರೀಯ ಮಟ್ಟದ ಹಂಪಿ ಟೂರಿಸಂ ಸರ್ಕಿಟ್ ನ್ನು ಮಾಡಲು ಯೋಜಿಸಲಾಗಿದೆ. ಹಂಪಿ ಮತ್ತು ಮೈಸೂರನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಂತಾರಾಷ್ಟ್ರೀಯ ಸರ್ಕಿಟ್ ಮಾಡಲು ಚಿಂತಿಸಿದ ಕಾರಣ ಯೋಜನೆ ರೂಪಿಸಲಾಗಿದೆ. ಪುರಾತತ್ವ ಇಲಾಖೆ ವ್ಯಾಪ್ತಿಯ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಲ್ಲವುಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಇದರ ಜೊತೆಗೆ ಅಂತಾರಾಷ್ಟ್ರೀಯ ಪ್ರವಾಸಿಗರಿಗೂ ವ್ಯವಸ್ಥೆ ಕಲ್ಪಿಸಲಾಗುವುದು. ಈ ಭಾಗದ ಐತಿಹಾಸಿಕ ಪ್ರವಾಸಿತಾಣಗಳ ಅಭಿವೃದ್ಧಿಗೆ ಒತ್ತುಕೊಡಲಿದ್ದೇವೆ ಎಂದರು.
ಹನುಮನ ಜನಿಸಿದ್ದು ಅಂಜನಾದ್ರಿಯಲ್ಲಿಯೇ ಎಂದು ನಾನು ಸಾವಿರ ಸಲ ಹೇಳುತ್ತೇನೆ. ಸಾವಿರಾರು ವರ್ಷಗಳಿಂದ ಇರುವ ಕಿಷ್ಕಿಂದ ಪುರಾವೆಗಳ ಪ್ರಕಾರ ಹನುಮ ಹುಟ್ಟಿದ್ದು ಇಲ್ಲೇ ಎಂದು ಸಾರಿ ಸಾರಿ ಹೇಳುತ್ತವೆ. ಇದನ್ನು ಬಿಟ್ಟು ಹೇಳಲು ಬೇರೆ ಪುರಾವೆಗಳು ಬೇಕಿಲ್ಲ. ಇತ್ತೀಚಿನ ದಿನಗಳಲ್ಲಿ ಆಂಜನೇಯ ಅಲ್ಲಿ ಜನಿಸಿದ್ದ ಇಲ್ಲಿ ಜನಸಿದ್ದ ಎಂಬ ವಿವಾದಗಳು ಕೇಳಿಬರುತ್ತಿವೆ. ಅಂಜನಾದ್ರಿಯೇ ಹನುಮಂತನು ಜನಿಸಿದ ಪ್ರದೇಶವಾಗಿದೆ ಎಂದು ಹೇಳುವುದುಕ್ಕೆ ಎರಡು ಮಾತಿಲ್ಲ ಎಂದು ಹೇಳಿದರು.
ಬಿಜೆಪಿ ಸರ್ಕಾರದ ಆಡಳಿತ ವೈಖರಿ ಕುರಿತು ಟ್ವೀಟ್ ಮಾಡಿರುವ ಚಕ್ರವರ್ತಿ ಸೂಲಿಬೆಲೆ ನಮ್ಮ ಆತ್ಮೀಯರು. ಹಿಂದೂತ್ವದ ಪರ ಇರುವಂತವರು. ಹಿಂದೂಗಳ ಕೊಲೆಯಾದಾಗ ಸಹಜವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ಮಾತನಾಡಿ ತನಿಖೆಯ ಪ್ರಗತಿ ತಿಳಿಸುತ್ತೇನೆ ಎಂದು ಹೇಳಿದರು.










