ಕಾಮನ್​ವೆಲ್ತ್​ ಗೇಮ್ಸ್: ಕಂಚು ಗೆದ್ದ ಭಾರತದ ವೇಟ್ ಲಿಫ್ಟರ್ ಗುರ್​ದೀಪ್ ಸಿಂಗ್.

91
firstsuddi

ಬರ್ಮಿಂಗ್‌ಹ್ಯಾಮ್‌ : ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ವೇಟ್ ಲಿಫ್ಟರ್ ಗುರ್​ದೀಪ್ ಸಿಂಗ್ ಅವರು ಕಂಚು ಪದಕ ಗೆದ್ದಿದ್ದಾರೆ. ಪುರುಷರ 109 ಕೆಜಿ ವಿಭಾಗದಲ್ಲಿ ಫೈನಲ್ ನಲ್ಲಿ ಗುರ್​ದೀಪ್ ಸಿಂಗ್ ಸ್ನ್ಯಾಚ್ ನಲ್ಲಿ 167, ಕ್ಲೀನ್ ಅಂಡ್ ಜರ್ಕ್ ನಲ್ಲಿ 223 ಕೆಜಿ ಭಾರ ಎತ್ತಿದರು. ಒಟ್ಟು 390 ಕೆಜಿ ತೂಕವನ್ನು ಎತ್ತುವ ಮೂಲಕ ಮೂರನೇ ಸ್ಥಾನ ಪಡೆದರು.

ತೇಜಸ್ವಿನ್ ಶಂಕರ್ ಗೆ ಕಂಚು: ಪುರುಷರ ಹೈ ಜಂಪ್ ನಲ್ಲಿ ಭಾರತದ ತೇಜಸ್ವಿನ್ ಶಂಕರ್ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಶಂಕರ್ 2.22 ಮೀಟರ್ ಜಿಗಿದು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ವಿಶೇಷ ಎಂದರೆ ಕಾಮನ್ ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಪುರುಷರ ಹೈ ಜಂಪ್ ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕ ಇದಾಗಿದೆ.

ಜುಡೋದಲ್ಲಿ ಮೂರನೇ ಪದಕ: ಮಹಿಳೆಯರ +78 ಕೆಜಿ ವಿಭಾಗದ ಫೈನಲ್‌ನಲ್ಲಿ ತುಲಿಕಾ ಮಾನ್ ಅವರು ಸ್ಕಾಟ್ಲೆಂಡ್‌ನ ಸಾರಾ ಅಡ್ಲಿಂಗ್ಟನ್ ವಿರುದ್ಧ ಸೋಲು ಅನುಭವಿಸುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ. ಈ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಜೂಡೋದಲ್ಲಿ ಭಾರತಕ್ಕೆ ಇದು ಮೂರನೇ ಪದಕವಾಗಿದೆ.

ಸೌರವ್ ಗೆ ಸ್ಕ್ವ್ಯಾಶ್ ಕಂಚು: ಭಾರತದ ತಾರಾ ಸ್ಕ್ವ್ಯಾಶ್ ಆಟಗಾರ ಸೌರವ್ ಘೋಷಾಲ್ ಪುರುಷರ ಸಿಂಗಲ್ಸ್ನಲ್ಲಿ ಐತಿಹಾಸಿಕ ಕಂಚಿನ ಪದಕ ಸಾಧನೆ ಮಾಡಿದರು. ಇಂಗ್ಲೆಂಡ್ ನ ಜೇಮ್ಸ್ ವಿಲ್ಸ್​ಟ್ರೊಪ್​ ವಿರುದ್ಧ 11-6, 11-1,11-4 ಅಂತರದಲ್ಲಿ ಜಯ ಸಾಧಿಸಿದರು. ಕಾಮನ್ ವೆಲ್ತ್ ಗೇಮ್ಸ್ ಇತಿಹಾಸದಲ್ಲಿಯೇ ಭಾರತಕ್ಕೆ ಸ್ಕ್ವ್ಯಾಶ್ ಗೆ ಸಿಕ್ಕ ಮೊದಲ ಪದಕ ಇದಾಗಿದೆ.

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 5 ಚಿನ್ನ, 6 ಬೆಳ್ಳಿ, 7 ಕಂಚು ಸೇರಿದಂತೆ 18 ಪದಕಗಳನ್ನು ಪಡೆದಿರುವ ಭಾರತ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದೆ.