ಆಧುನಿಕತೆಯ ಭರಾಟೆಯಲ್ಲಿ ನಾವು ಗ್ರಾಮೀಣ ಬದುಕಿನ ನಿರ್ಮಲತೆ ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿ : ಗೀತಾ ಎಂ.ಎಲ್.ಮೂರ್ತಿ.

81

ಚಿಕ್ಕಮಗಳೂರು : ಇಲ್ಲಿನ ಟೌನ್ ಮಹಿಳಾ ಸಮಾಜದ ಜ್ಞಾನ ಜ್ಯೋತಿ ಟಿ.ಎಂ.ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ದಿನವನ್ನು ಆಚರಿಸಲಾಯಿತು.

ಸಾಂಸ್ಕೃತಿಕ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಟೌನ್ ಮಹಿಳಾ ಸಮಾಜದ ಅಧ್ಯಕ್ಷೆ ಗೀತಾ ಎಂ.ಎಲ್.ಮೂರ್ತಿ ರವರು, ಆಧುನಿಕತೆಯ ಭರಾಟೆಯಲ್ಲಿ ನಾವು ನಮ್ಮ ಸಂಸ್ಕೃತಿ, ಹಿನ್ನೆಲೆ, ಗ್ರಾಮೀಣ ಕ್ರೀಡೆಗಳು ಮತ್ತು ಗ್ರಾಮೀಣ ಬದುಕಿನ ನಿರ್ಮಲತೆಯನ್ನು ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿ ಎಂದರು.

ಉತ್ತಮ ಸಂಸ್ಕಾರ ಹೊಂದಿರುವ ಯುವಜನತೆಯಿಂದ ಮಾತ್ರ ನಮ್ಮ ಸಂಸ್ಕೃತಿ ವೈಭವ ಉಳಿಸಲು ಸಾಧ್ಯ ಎಂದು ಹೇಳಿದರು.

ಭಾರತ ಎಲ್ಲಾ ದೇಶಕ್ಕಿಂತಲೂ ವಿಭಿನ್ನವಾದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಆದರೆ, ಆಧುನಿಕತೆ ನಮ್ಮ ಬದುಕನ್ನು ಆವರಿಸುತ್ತಿರುವುದರಿಂದ ನಮ್ಮ ಬದುಕಿನ ಮೂಲ ತತ್ವಗಳೇ ನಾವು ಮರೆತು ಬಿಡುತ್ತಿರುವುದಾಗಿದೆ. ಆದುದ್ದರಿಂದ ಈ ರೀತಿ ಯುವ ಸಮೂಹ ಮತ್ತು ವಿದ್ಯಾರ್ಥಿಗಳು ಗ್ರಾಮೀಣ ಬದುಕಿನ ಸಂಭ್ರಮವನ್ನು ಕಾಲೇಜು ಆವರಣದಲ್ಲಿ ಕಟ್ಟಿಕೊಡುವುದರ ಮೂಲಕ ಗ್ರಾಮೀಣ ಸಂಸ್ಕಾರವನ್ನು ಹೆಚ್ಚು ಪ್ರೀತಿಯಿಂದ ಕಾಣುತ್ತಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಎಂಬಿ.ಕಟಗಿ ರವರು, ದೇಶದ ಗ್ರಾಮೀಣ ಬದುಕಿನ ವಸ್ತುಸ್ಥಿತಿಯನ್ನು ಮತ್ತು ಗ್ರಾಮೀಣ ಇತಿಹಾಸವನ್ನು ಪ್ರಚಲಿತಗೊಳಿಸುತ್ತಿರುವುದು ಅತ್ಯವಶ್ಯಕ ಹಾಗೂ ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹಾಗೂ ಹಿರಿಯ ವಕೀಲರಾದ ಹೆಚ್.ಎಸ್.ವೆಂಕಟೇಶ್ ಮಾತನಾಡಿ, `ಬಿದರಮ್ಮ ತಾಯಿ’ ಎಂಬ ಜಾನಪದ ಗೀತೆಯ ಮೂಲಕ ಗ್ರಾಮೀಣ ಬದುಕಿನ ಬಗ್ಗೆ ಬೆಳಕು ಚಲ್ಲಿದರು.

ವಿದ್ಯಾರ್ಥಿಗಳು ಸಂಭ್ರಮ ಸಡಗರದಿಂದ ಗ್ರಾಮೀಣ ಶೈಲಿಯಲ್ಲಿ ಸಾಂಸ್ಕೃತಿಕ ದಿನವನ್ನು ಆಚರಿಸಿರುವುದು ವಿಶೇಷವಾಗಿತ್ತು.
ಅಲಂಕರಿಸಿದ ಎತ್ತಿನ ಗಾಡಿಯಲ್ಲಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಎತ್ತಿನಗಾಡಿ ಏರಿ ಸಂಭ್ರಮಿಸಿದರು. ಕಾಲೇಜಿನ ಆಡಳಿತ ಮಂಡಳಿ ಸದಸ್ಯರುಗಳು ಮತ್ತು ಶಿಕ್ಷಕರು ಇದಕ್ಕೆ ಸಾಥ್ ನೀಡಿದರು.

ಕಾಲೇಜು ಆವರಣವನ್ನು ಮಾವು,ಬಾಳೆ ಕಂದುಗಳಿಂದ ಅಲಂಕರಿಸಲಾಯಿತು. ಸಾಂಪ್ರದಾಯಿಕ ತೊಡುಗೆಗಳನ್ನು ಧರಿಸಿದ್ದ ವಿದ್ಯಾರ್ಥಿಗಳು ಕಾರ್ಯಕ್ರಮದ ನಂತರ ಸಾಂಪ್ರದಾಯಿಕ ಶೈಲಿಯಲ್ಲಿ ಕುಳಿತು ಊಟ ಸವಿದು ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಆಡಳಿತ ಮಂಡಳಿ ನಿರ್ದೇಶಕರುಗಳು ಮತ್ತು ಕಾಲೇಜಿನ ಇತರೆ ಸಿಬ್ಬಂದಿಯವರು ಉಪಸ್ಥಿತರಿದ್ದರು.