ಚಿಕ್ಕಮಗಳೂರು : ಜಿಲ್ಲಾ ಸರ್ಕಾರಿ ನೌಕರರ ಸಂಘ ನಗರದಲ್ಲಿ ನಿರ್ಮಿಸುತ್ತಿರುವ ಸಮುದಾಯ ಭವನಕ್ಕೆ ಸರ್ಕಾರಿ ಆದೇಶದ ಪ್ರಕಾರ ಎಲ್ಲಾ ಸರ್ಕಾರಿ ನೌಕರರೂ ತಮ್ಮ ಒಂದು ದಿನದ ವೇತನವನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸೂಚಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಸರ್ಕಾರಿ ನೌಕರರ ಸಂಘ ನಗರದ ಕುವೆಂಪು ಕಲಾ ಮಂದಿರದಲ್ಲಿ ಬಟವಾಡೆ ಅಧಿಕಾರಿಗಳಿಗೆ ನಿನ್ನೆ ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘ ನಗರದಲ್ಲಿ ಸರ್ಕಾರಿ ನೌಕರರ ಸಮುದಾಯ ಭವನವನ್ನು ನಿರ್ಮಿಸಲು ಮುಂದಾಗುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ, ಸಮುದಾಯ ಭವನದಿಂದ ಸರ್ಕಾರಿ ನೌಕರರಿಗೆ ಬಹಳಷ್ಟು ಪ್ರಯೋಜನವಾಗಲಿದೆ ಎಂದರು.
ಒಂದು ದಿನದ ವೇತನವನ್ನು ಸಮುದಾಯ ಭವನಕ್ಕೆ ನೀಡಲು ಇಚ್ಚಿಸದವರು ಸಂಬಂಧಪಟ್ಟ ಅಧಿಕಾರಿಗಳಿಗೆ ಆ.10ರ ಒಳಗೆ ಲಿಖಿತವಾಗಿ ತಿಳಿಸಬೇಕು ಎಂದು ಹೇಳಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಪ್ರಭು ಮಾತನಾಡಿ ಸಮುದಾಯ ಭವನದಿಂದ ಸರ್ಕಾರಿ ನೌಕರರಿಗೆ ಬಹಳಷ್ಟು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿ ಎಂ.ಹೆಚ್.ಅಕ್ಷಯ್, ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಪ್ರಭು ಅವರು ಸಮುದಾಯ ಭವನ ನಿರ್ಮಾಣಕ್ಕೆ ತಲಾ ಹತ್ತು ಸಾವಿರ ದೇಣಿಗೆ ನೀಡುವುದಾಗಿ ಪ್ರಕಟಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಸಮುದಾಯ ನಿರ್ಮಾಣಕ್ಕೆ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರೂ ಒಂದು ದಿನದ ವೇತನ ನೀಡುವ ಮೂಲಕ ಸಂಘದೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
ತಲಾ ಹತ್ತು ಸಾವಿರ ದೇಣಿಗೆ ಪ್ರಕಟಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿ ಮತ್ತು ಜಿ.ಪಂ. ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಾಗಾರದಲ್ಲಿ ಬಟವಾಡೆ ಅಧಿಕಾರಿಗಳಿಗೆ ಕೆ.ಸಿ.ಎಸ್.ಆರ್-ಹೆಚ್.ಆರ್.ಎಂ.ಎಸ್ ಮತ್ತು ಖಜಾನೆ-2 ತಂತ್ರಾಂಶ ನಿರ್ವಹಣೆ ಕುರಿತು ತರಬೇತಿ ನೀಡಲಾಯಿತು.
ಖಜಾನಾಧಿಕಾರಿ ಓಂಕಾರಪ್ಪ, ಸತ್ಯನಾರಾಯಣ, ಪೂರ್ಣೇಶ್, ಲೋಹಿತ್, ಓಂಕಾರಸ್ವಾಮಿ, ಶಿವಕುಮಾರ್, ವಸಂತಕುಮಾರ್, ಪದ್ಮರಾಜ್ ಉಪಸ್ಥಿತರಿದ್ದರು.










