ಬರ್ಮಿಂಗ್ಹ್ಯಾಮ್ : ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ 2022 ರಲ್ಲಿ ಭಾರತದ ಬಾಕ್ಸರ್ ಸಾಗರ್ ಅಹ್ಲಾವತ್ ಪುರುಷರ 92ಕೆಜಿ ಫೈನಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಇಂಗ್ಲೆಂಡ್ ನ ಡೆಲೀಶಿಯಸ್ ಓರಿಯೊ ವಿರುದ್ಧ 0-5 ಅಂತರದಿಂದ ಸೋಲು ಅನುಭವಿಸುವ ಮೂಲಕ ಸಾಗರ್ ಚಿನ್ನದ ಬದಲು ಬೆಳ್ಳಿ ಪದಕಕ್ಕೆ ಕೊರಳೊಡ್ಡಬೇಕಾಯಿತು.
ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕದ ಸಂಖ್ಯೆ 55ಕ್ಕೇರಿದೆ. 18 ಚಿನ್ನ, 15 ಬೆಳ್ಳಿ ಮತ್ತು 22 ಕಂಚನ್ನು ಭಾರತ ಬಾಚಿಕೊಂಡಿದೆ. ನಿನ್ನೆ ಒಂದೇ ದಿನ ವಿವಿಧ ವಿಭಾಗದಲ್ಲಿ 18 ಪದಕಗಳನ್ನು ಬಾಚಿಕೊಂಡಿದೆ. 6 ಚಿನ್ನ, 4 ಬೆಳ್ಳಿ, 8 ಕಂಚು ಪದಕಗಳನ್ನು ಗೆದ್ದಿದೆ.
ಮಹಿಳೆಯರ (45-48 ಕೆಜಿ ವಿಭಾಗ) ಫೈನಲ್ ಪಂದ್ಯದಲ್ಲಿ ನೀತು ಗಂಗಾಸ್ ಚಿನ್ನ ಗೆದ್ದರು. ಅಲ್ಲದೇ, ಪುರುಷರ (48-51 ಕೆಜಿ ವಿಭಾಗ) ಬಾಕ್ಸಿಂಗ್ ನಲ್ಲಿ ಅಮಿತ್ ಪಂಗಲ್ ಕೂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಬಳಿಕ ಮಹಿಳೆಯರ 50 ಕೆಜಿ ವಿಭಾಗದಲ್ಲಿ ನಿಖತ್ ಜರೀನ್ ಚಿನ್ನದ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದರು. ಈ ಮೂಲಕ ಒಂದೇ ದಿನ ಭಾರತಕ್ಕೆ ಬಾಕ್ಸಿಂಗ್ ನಲ್ಲಿ ಮೂರು ಚಿನ್ನದ ಪದಕಗಳು ಬಂದವು.










