ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ಉತ್ತಮ ನಾಗರೀಕರಾಗಿ ಹೊರಹೊಮ್ಮುವಂತೆ ಕೈದಿಗಳಿಗೆ ಜಿಲ್ಲಾಧಿಕಾರಿ ಕಿವಿಮಾತು…

94
firstsuddi

ಚಿಕ್ಕಮಗಳೂರು : ಕಾರಾಗೃಹದಲ್ಲಿ ದೊರೆಯುವ ಶಿಕ್ಷಣ ಮತ್ತು ಕೌಶಲ್ಯ ತರಬೇತಿಯನ್ನು ಪಡೆದು ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ಉತ್ತಮ ನಾಗರೀಕರಾಗಿ ಹೊರಹೊಮ್ಮುವಂತೆ ಕೈದಿಗಳಿಗೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಕಿವಿಮಾತು ಹೇಳಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸೇವಾದಳದ ಜಿಲ್ಲಾ ಘಟಕ ನಗರದ ಜಿಲ್ಲಾ ಕಾರಾಗೃಹದಲ್ಲಿ ಇಂದು ಏರ್ಪಡಿಸಿದ್ದ ಪರಿವರ್ತನಾ ಮತ್ತು ಚಿಂತನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಮಾಡುತ್ತಿರುವುದು ತಪ್ಪು ಎಂಬ ಅರಿವಿಲ್ಲದಿರುವುದರಿಂದಾಗಿ ಮನುಷ್ಯ ಅಪರಾಧಿಯಾಗುತ್ತಾನೆ, ತಪ್ಪು ಮಾಡದವರು ಈ ಸಮಾಜದಲ್ಲಿ ಯಾರೂ ಇಲ್ಲ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ತಪ್ಪು ಮಾಡಿರುತ್ತಾರೆ ಆದರೆ ಅದನ್ನು ತಿದ್ದಿಕೊಂಡು ಪಶ್ಚಾತ್ತಾಪ ಪಟ್ಟು ಪ್ರಾಮಾಣಿಕವಾಗಿ ಮನಸ್ಸನ್ನು ಪರಿವರ್ತನೆ ಮಾಡಿಕೊಂಡರೆ ನಮ್ಮ ಬದುಕು ಸುಖಮಯವಾಗುತ್ತದೆ ಎಂದರು.

ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ ಸಮಾಜದ, ದೇಶದ ಅಭಿವೃದ್ದಿಯಾಗಬೇಕಾದರೆ ನಾವು ದುಡಿದು ತಿನ್ನುವುದನ್ನು ಕಲಿಯಬೇಕು, ಹೊಡೆದುಕೊಂಡು ತಿನ್ನುವುದನ್ನು ಬಿಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಹೆಚ್.ನರೇಂದ್ರ ಪೈ ಶಿಬಿರದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಭಾರತ ಸೇವಾದಳದ ರಾಜ್ಯ ಸಮಿತಿ ಸದಸ್ಯ ಐ.ಬಿ.ಶಂಕರ್, ತಾಲ್ಲೂಕು ಉಪಾಧ್ಯಕ್ಷ ಸಿ.ಸಿ.ಈರೇಗೌಡ, ಮಾಜಿ ಅಧ್ಯಕ್ಷ ಬಿ.ಆರ್.ಜಗದೀಶ್, ಸಾಹಿತಿ ನಾಗಶ್ರೀ ತ್ಯಾಗರಾಜ್, ಕಾರಾಗೃಹದ ಅಧೀಕ್ಷಕ ಎಸ್.ಎಸ್.ಮೇಟಿ ಮಾತನಾಡಿದರು.

ಸಮಾರಂಭದ ನಡುವೆ ಹಿರೇನಲ್ಲೂರು ಶ್ರೀನಿವಾಸ್ ಅವರಿಂದ ಗಾಯನ, ನಟನಂ ನಾಟ್ಯ ಸೇವಾ ಸಂಘದಿಂದ ನೃತ್ಯ, ಎಂ.ಬಿ.ಯತೀಶ್ ಅವರಿಂದ ಯೋಗ ಪ್ರದರ್ಶನ ಜರುಗಿತು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಮನೆ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್, ಜಿಲ್ಲಾ ಉಪಾಧ್ಯಕ್ಷ ಎಸ್.ವಿ.ಬಸವರಾಜಪ್ಪ, ಖಜಾಂಚಿ ಎನ್.ಎಸ್.ಜಗದೀಶಾಚಾರ್, ಸದಸ್ಯರಾದ ಉಮಾ ಐ.ಬಿ.ಶಂಕರ್, ಮೀನಾಕ್ಷಿ, ಎಸ್.ತಿಪ್ಪೇಶ್, ಶಿಕ್ಷಕ ರಾಜ್‍ಕುಮಾರ್ ಉಪಸ್ಥಿತರಿದ್ದರು.