ಬೆಂಗಳೂರು : ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಮಾಡಿ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಠಾಣೆಯ ಪೊಲೀಸರು 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. 450 ಪುಟದ ಚಾರ್ಜ್ ಶೀಟ್ ನಲ್ಲಿ 20 ಮಂದಿ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ.
ಹಿಂದೂ ಪರ ಸಂಘಟನೆಯೊಂದರ ಕಾರ್ಯಕರ್ತ ಭರತ್ ಶೆಟ್ಟಿ ಸಹಚರರಾದ ಶಿವಕುಮಾರ್, ಪ್ರದೀಪ್ ಕುಮಾರ್ ಹಾಗೂ ಉಮಾದೇವಿ ಆರೋಪಿಗಳಾಗಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿಯಾದ ಭರತ್ ಶೆಟ್ಟಿಗೆ ಜಾಮೀನು ಸಿಕ್ಕಿದೆ.
ಚಾರ್ಜ್ಶೀಟ್ನಲ್ಲಿ ಏನಿದೆ?
ಸಮಾಜದಲ್ಲಿ ಗುರುತಿಸಿಕೊಳ್ಳಬೇಕು, ಫೇಮಸ್ ಆಗಬೇಕು, ಎಲ್ಲೇ ಹೋದರೂ ನಮ್ಮ ಕಡೆಯೇ ಎಲ್ಲರ ಗಮನ ಇರಬೇಕೆಂದು ಆರೋಪಿಗಳು ಮಸಿ ಬಳಿದಿದ್ದಾರೆ. ಮಸಿ ಬಳಿಯಲು ವಾರದಿಂದ ಪೋನಿನಲ್ಲಿ ನಡೆಸಿದ ಸಂಭಾಷಣೆ, ಟೆಕ್ನಿಕಲ್ ದಾಖಲೆ, ಸಿಸಿಟಿವಿ ವಿಡಿಯೋ ವಿವರಗಳನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ರಾಕೇಶ್ ಟಿಕಾಯತ್ ಅವರು ಮೇ 29 ರಂದು ಬೆಂಗಳೂರಿಗೆ ಬಂದ ದಿನವೇ ಮೊಟ್ಟೆ, ಕೊಳೆತ ಟೊಮೆಟೊ ಎಸೆಯಲು ಪ್ಲಾನ್ ಮಾಡಿದ್ದರು. ಆದರೆ ಈ ಪ್ಲ್ಯಾನ್ ಸಾಧ್ಯವಾಗದ ಹಿನ್ನೆಲೆಯಲ್ಲಿ ಗಾಂಧಿಭವನ ಬಳಿಯೂ ಮೊಟ್ಟೆಯನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಪೊಲೀಸ್ ಭದ್ರತೆ ಹಿನ್ನೆಲೆಯಲ್ಲಿ ಸ್ಟೇಜ್ ಗೆ ಬಾಟಲಿಯಲ್ಲಿ ಮಸಿ ತೆಗೆದುಕೊಂಡು ಹೋಗಿದ್ದರು. ಆರೋಪಿಗಳು ಟಿಕಾಯತ್ ಮೇಲೆ ಹಲ್ಲೆ ಮಾಡುವ ಯೋಚನೆ ಇರಲಿಲ್ಲ. ಆದರೆ ಶಿವಕುಮಾರ್ ಉದ್ರೇಕಗೊಳಗಾಗಿ ಲೋಗೊದಿಂದಲೇ ಹಲ್ಲೆ ಮಾಡಿದ್ದಾನೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.










