ಬಾಗಲಕೋಟೆ : ಯೋಧರೊಬ್ಬರಿಗೆ ಪತ್ನಿಯ ಸಹೋದರನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ನಡೆದಿದೆ.
ಕರಿಸಿದ್ದಪ್ಪ ಕಳಸದ (25) ಕೊಲೆಯಾದ ಯೋಧ. ಸಿದ್ದನಗೌಡ ದೂಳಪ್ಪನವರ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕರಿಸಿದ್ದಪ್ಪ ಕಳಸದ ಅವರು ರಜೆ ಹಿನ್ನೆಲೆ ನಾಲ್ಕು ದಿನಗಳ ಹಿಂದೆಯಷ್ಟೇ ಮನೆಗೆ ಬಂದಿದ್ದರು. ಎರಡು ವರ್ಷಗಳ ಹಿಂದೆ ಕರಿಸಿದ್ದಪ್ಪ ಕಳಸದ, ವಿದ್ಯಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ನಿನ್ನೆ ರಾತ್ರಿ ಊಟ ಮಾಡುವ ವೇಳೆ ದಂಪತಿ ನಡುವೆ ಜಗಳವಾಗಿದೆ.
ಬಳಿಕ ಪತ್ನಿ ವಿದ್ಯಾ ತನ್ನ ಸಹೋದರನಿಗೆ ಕರೆ ಮಾಡಿ ಮನೆಗೆ ಕರೆಸಿದ್ದರು. ಕೋಪದಲ್ಲಿ ಬಂದ ಸಿದ್ದನಗೌಡ ತನ್ನ ಸಹೋದರಿಗೆ ಕಿರುಕುಳ ಕೊಡುತ್ತಿಯಾ ಎಂದು ಚಾಕುವಿನಿಂದ ಸಹೋದರಿಯ ಪತಿಗೆ ಇರಿದಿದ್ದಾನೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಯೋಧ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕೆರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










