ಲಕ್ನೋ : ಉತ್ತರ ಪ್ರದೇಶದ ಮಥುರಾ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ವೇಳೆ ಅವಘಡ ಸಂಭವಿಸಿದೆ. ಜನ್ಮಾಷ್ಟಮಿ ಆಚರಣೆಯ ಸಂದರ್ಭದಲ್ಲಿ ಬಂಕೆ ಬಿಹಾರಿ ದೇವಸ್ಥಾನದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿದ್ದಾರೆ.
ಜನ್ಮಾಷ್ಟಮಿಯ ಆಚರಣೆ ವೇಳೆ ದೇವಾಲಯದಲ್ಲಿ ಭಕ್ತರ ಸಂಖ್ಯೆ ಏರಿಕೆಯಾಗಿ, ಆರತಿಯ ಸಮಯ ದೇವಾಲಯದ ಒಳಗೆ ಜನರು ನುಗ್ಗಲಾರಂಭಿಸಿದರು. ಈ ವೇಳೆ ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇನ್ನೂ 6 ಮಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಥುರಾದ ಹಿರಿಯ ಪೊಲೀಸ್ ಅಭಿಷೇಕ್ ಯಾದವ್ ತಿಳಿಸಿದ್ದಾರೆ.
ದುರ್ಘಟನೆಯಲ್ಲಿ ಮೃತಪಟ್ಟ ಭಕ್ತರ ಶವವನ್ನು ಮರಣೋತ್ತರ ಪರೀಕ್ಷೆ ನಡೆಸದೇ ಅವರ ಕುಟುಂಬಸ್ಥರು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.










