ವಾಷಿಂಗ್ಟನ್ : ಭಾರತದ ಮೂಲದ ನಾಲ್ವರು ಅಮೆರಿಕನ್ನರ ಗುಂಪಿನ ಮೇಲೆ ಮೆಕ್ಸಿಕನ್ ಅಮೆರಿಕನ್ ಮಹಿಳೆಯೊಬ್ಬರು ನಿಂದನೆ ಮಾಡಿ, ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟೆಕ್ಸಾಸ್ ನಗರದ ದಲ್ಲಾಸ್ ನ ರೆಸ್ಟೋರೆಂಟ್ ಒಂದರ ಪಾರ್ಕಿಂಗ್ ಲಾಟ್ ನಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಮೆಕ್ಸಿಕನ್ ಮಹಿಳೆಯು ಭಾರತೀಯರನ್ನು ನಿಂದಿಸಿರುವುದಲ್ಲೇ ಹಲ್ಲೆ ಕೂಡ ನಡೆಸಿದ್ದಾರೆ. ನೀವು ಭಾರತಕ್ಕೆ ವಾಪಸ್ ಹೋಗಿ. ನಾನು ಭಾರತೀಯರನ್ನು ದ್ವೇಷಿಸುತ್ತೇನೆ. ಎಲ್ಲ ಭಾರತೀಯರು ಉತ್ತಮ ಜೀವನ ನಡೆಸಲು ಅಮೆರಿಕಕ್ಕೆ ಬರುತ್ತಾರೆ ಎಂದು ನಿಂದಿಸಿದ್ದಾರೆ.
ಆರೋಪಿ ಮಹಿಳೆಯನ್ನು ಎಸ್ಮೆರಾಲ್ಡಾ ಅಪ್ಟನ್ ಎಂದು ಗುರುತಿಸಲಾಗಿದ್ದು, ಪ್ಲ್ಯಾನೋ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆಕೆ ವಿರುದ್ಧ ಹಲ್ಲೆ, ದೇಹಕ್ಕೆ ಗಾಯ ಮಾಡಿರುವುದು ಮತ್ತು ಭಯೋತ್ಪಾದಕ ಬೆದರಿಕೆ ಆರೋಪಗಳನ್ನು ದಾಖಲಿಸಲಾಗಿದೆ. 10,000 ಅಮೆರಿಕನ್ ಡಾಲರ್ ಬಾಂಡ್ ಮೇಲೆ ಆಕೆಯನ್ನು ಬಂಧಿಸಲಾಗಿದೆ. ಸದ್ಯ ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮಹಿಳೆಯೊಬ್ಬರು ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸ್ನೇಹಿತರೊಂದಿಗೆ ಡಿನ್ನರ್ ಗಾಗಿ ಹೋಗಿದ್ದೆವು. ನಾವು ಸಿಕ್ಸ್ಟಿ ವೈನ್ಸ್ ರೆಸ್ಟೋರೆಂಟ್ ನಿಂದ ಕಾರು ಪಾರ್ಕಿಂಗ್ ಸ್ಥಳಕ್ಕೆ ಹೋಗುತ್ತಿರುವಾಗ ಕುಡಿದ ಅಮಲಿನಲ್ಲಿದ್ದ ಮಹಿಳೆ ದ್ವೇಷಪೂರಿತ ಜನಾಂಗೀಯ ನಿಂದನೆಯೊಂದಿಗೆ ನಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾಳೆ ಎಂದು ಆರೋಪ ಮಾಡಿದ್ದಾರೆ.










