ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ಐಎನ್ಎಸ್ ವಿಕ್ರಾಂತ್ ಲೋಕಾರ್ಪಣೆ…

49
firstsuddi

ಕೊಚ್ಚಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ಯುದ್ಧನೌಕೆ ಐಎನ್ಎಸ್ ವಿಕ್ರಾಂತ್ ಅನ್ನು ಲೋಕಾರ್ಪಣೆಗೊಳಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇರಳ ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ, ಇಂದು ಭಾರತ ಮಹತ್ವದ ಮೈಲಿಗಲ್ಲು ನಿರ್ಮಿಸಿದೆ. ಕೇರಳದಲ್ಲಿ ಪವಿತ್ರ ಓಣಂ ಹಬ್ಬದ ದಿನ ಈ ಸಾಧನೆ ಸಾಧ್ಯವಾಗಿದೆ. ಸ್ವಾವಲಂಬನೆಯ ಆಶಯವನ್ನು ವಿಕ್ರಾಂತ್ ಯುದ್ಧನೌಕೆ ಈಡೇರಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಐಎನ್ ಎಸ್ ವಿಕ್ರಾಂತ್ ಸ್ಥಳೀಯ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಂಡಿದ್ದು, ಈ ಐತಿಹಾಸಿಕ ಸಂದರ್ಭದಲ್ಲಿ ನಾನು ಭಾರತೀಯ ನೌಕಾಪಡೆ, ಎಲ್ಲಾ ಎಂಜಿನಿಯರ್ ಗಳು, ವಿಜ್ಞಾನಿಗಳು ಮತ್ತು ಕೊಚ್ಚಿನ್ ಶಿಪ್ಯಾರ್ಡ್ ನ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

262 ಮೀ ಉದ್ದ ಮತ್ತು 62 ಮೀ ಅಗಲದ ವಿಕ್ರಾಂತ್ ಹಡಗಿನಲ್ಲಿ ಸುಮಾರು 2,200 ವಿಭಾಗಗಳಿವೆ, ಸುಮಾರು 1,600 ಸಿಬ್ಬಂದಿಗಾಗಿ ವಿನ್ಯಾಸಗೊಳಿಸಲಾಗಿದೆ, ಇದರಲ್ಲಿ ಮಹಿಳಾ ಅಧಿಕಾರಿಗಳು ಮತ್ತು ನಾವಿಕರಿಗೆ ಅವಕಾಶ ಕಲ್ಪಿಸಲು ವಿಶೇಷ ಕ್ಯಾಬಿನ್ ಗಳಿವೆ. ಯುದ್ಧನೌಕೆಯನ್ನು ಭಾರತದ ಪ್ರಮುಖ ಕೈಗಾರಿಕಾ ಸಂಸ್ಥೆಗಳು ಮತ್ತು 100 ಕ್ಕೂ ಹೆಚ್ಚು ಎಂಎಸ್ ಎಂಇಗಳು ಒದಗಿಸಿದ ಸ್ಥಳೀಯ ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಬಳಸಿ ನಿರ್ಮಿಸಲಾಗಿದೆ.