ಬೆಂಗಳೂರು : ಕಳೆದ ರಾತ್ರಿಯೆಲ್ಲಾ ಸುರಿದ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ನಗರದ ಹಲವೆಡೆ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳಲ್ಲಿ ಮಳೆ ನೀರು ತುಂಬಿ ಹೊಳೆಯಂತಾಗಿತ್ತು.
ಬೆಳ್ಳಂದೂರು ಕ್ರಾಸ್, ಸರ್ಜಾಪುರ ರಸ್ತೆಯ ರೈನ್ ಬೋ ಲೇಔಟ್ ಮತ್ತೆ ಜಲಾವೃತಗೊಂಡಿದೆ. ನಿವಾಸಿಗಳು ಜಲದಿಗ್ಬಂಧನದಲ್ಲಿದ್ದಾರೆ. ರೈನ್ ಬೋ ಲೇಔಟ್ ನ ಅಪಾರ್ಟ್ಮೆಂಟ್ ಬೇಸ್ ಮೆಂಟ್ ಗೆ ನೀರು ನುಗ್ಗಿದೆ. ಸರ್ಜಾಪುರ ರಸ್ತೆಯ ವಿಪ್ರೋ ಕಂಪನಿ ಸೇರಿ ಇಡೀ ಏರಿಯಾಗೆ ನೀರು ನುಗ್ಗಿದೆ. ಶಾಂತಿನಗರ, ಹೆಬ್ಬಾಳ ರಸ್ತೆಯಲ್ಲಿ ನೀರು ನಿಂತು ಪರಿಣಾಮ ವಾಹನ ಸವಾರರು ಪರದಾಟ ನಡೆಸುವಂತಾಗಿದೆ.
ರಾತ್ರೀ ಇಡೀ ಸುರಿದ ಭಾರೀ ಮಳೆಗೆ ಮುಕ್ತನಾತೇಶ್ವರ ದೇವಾಲಯದ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಅಮಾನಿಕೆರೆ, ಹಾಗೂ ಬಿನ್ನಮಂಗಲದ ಕೆರೆಗಳು ಕೋಡಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಎಂಜಿ ರಸ್ತೆ ಸಂಪರ್ಕ ಕಡಿತಗೊಳಿಸಲಾಗಿದೆ.
ಕೇವಲ 24 ಗಂಟೆಗಳಲ್ಲಿ ಸುಮಾರು 83 ಮಿಮೀ ಮಳೆಯಾಗಿದ್ದು, ಇದು 2014ರ ನಂತರ ನಗರದಲ್ಲಿ ಸುರಿದಿರುವ ಅತಿಹೆಚ್ಚಿನ ಮಳೆಯಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ.










