ಬೆಂಗಳೂರು : ಶಿಕ್ಷಣದ ಜೀವಾಳ ಶಿಕ್ಷಕರು. ಶಿಕ್ಷಕರಿಲ್ಲದೆ ಶಿಕ್ಷಣವನ್ನು ಊಹಿಸಲೂ ಸಾಧ್ಯವಿಲ್ಲ. ಮಾನವ ಸಂಕುಲದ ಸಮಗ್ರ ಅಭಿವೃದ್ಧಿಯಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ಗುರುಗಳು ವಹಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾಜಿ ರಾಷ್ಟ್ರಪತಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬದುಕು ಎಲ್ಲಕ್ಕಿಂತ ದೊಡ್ಡ ಗುರು. ಬದುಕಿನಲ್ಲಿ ಕಲಿಯುವ ಪ್ರತಿಯೊಂದನ್ನು ಮನದಾಳದಲ್ಲಿ ಇಟ್ಟುಕೊಂಡರೆ, ಪ್ರತಿದಿನ, ಪ್ರತಿ ಹಂತದಲ್ಲಿ ನಾವು ಕಲಿಯಲು ಸಾಧ್ಯವಿದೆ. ಬದುಕು ಮೊದಲು ಪರೀಕ್ಷೆ ನೀಡುತ್ತದೆ ನಂತರ ಫಲಿತಾಂಶ ಹಾಗೂ ಪಾಠ. ಬದುಕಿನ ಅನುಭವದಿಂದ ಪಾಠವನ್ನು ಕಲಿಯುತ್ತೇವೆ. ಆದರೆ ಈ ಬದುಕಿನಿಂದ ಪಾಠ ಕಲಿಯಲು ಸಿದ್ಧ ಮಾಡುವ ಕೆಲಸ ಶಿಕ್ಷಕರು ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿಗೆ ಜ್ಞಾನ, ಸರಿ ತಪ್ಪು ಎಂಬ ಪ್ರಜ್ಞೆ, ಪಾಪ ಪುಣ್ಯ ಎಂಬ ವಿಚಾರ ಬರುವುದು ಶಿಕ್ಷಕರು ನೀಡುವ ಜ್ಞಾನದಿಂದಾಗಿದೆ. ಶಿಕ್ಷಕರ ಕೆಲಸ ಅತ್ಯಂತ ಕಠಿಣ ಎಂದರು.
ರಾಧಾಕೃಷ್ಣನ್ ಒಬ್ಬ ಶ್ರೇಷ್ಠ ಗುರುಗಳು ಹಾಗೂ ಮೇಧಾವಿಗಳು. ಅವರ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯಾಗಿ ಮಾಡಿ ಶಿಕ್ಷಕರ ಸ್ಥಿತಿಗತಿ, ಚರ್ಚೆ, ಪರಿಹಾರ, ಒಳ್ಳೆ ಕೆಲಸ ಮಾಡಿದವರನ್ನು ಗುರುತಿಸುವ ಪರಂಪರೆ ಇದೆ. ಸಾವಿತ್ರಿ ಬಾಯಿ ಫುಲೆ ಅವರು ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ದೊಡ್ಡ ಬದಲಾವಣೆಯನ್ನು ತಂದ ಶ್ರೇಷ್ಠ ವ್ಯಕ್ತಿ. ಈ ಜಗತ್ತಿನಲ್ಲಿ ಬದಲಾವಣೆಗಳು ಕೇವಲ ವ್ಯಕ್ತಿಯಿಂದ ಸಾಧ್ಯವಾಗಿದೆ. ದೇಶ ಕಂಡ ಅಪ್ರತಿಮ ಶ್ರೇಷ್ಠ ಶಿಕ್ಷಕಿ. ಶಿಕ್ಷಣದಲ್ಲಿ ಕ್ರಾಂತಿ ತಂದ ಸಾವಿತ್ರಿ ಬಾಯಿ ಫುಲೆ ಅವರನ್ನು ಸ್ಮರಿಸಬೇಕು. ವರ್ಷವಿಡೀ ಕಷ್ಟಪಟ್ಟು ಮಕ್ಕಳಿಗೆ ಜ್ಞಾನಾರ್ಜನೆ ಮಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವವರು ಶಿಕ್ಷಕರು. ಎಲ್ಲರಿಗೂ ಗೌರವ ತರುವ ರೀತಿಯಲ್ಲಿ ಕೆಲಸ ಮಾಡಿದ್ದರಿಂದ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಪಡೆದ ಶಿಕ್ಷಕರನ್ನು ಅಭಿನಂದಿಸಿದರು.
ನಮ್ಮ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಿದೆ. ಶಿಕ್ಷಣ ನೀತಿ, ವ್ಯವಸ್ಥೆ, ಗುರುಗಳು, ವಿದ್ಯಾರ್ಥಿಗಳು ಎಲ್ಲಾ ವಿಚಾರಗಳನ್ನು ಆಮೂಲಾಗ್ರವಾಗಿ ಬದಲಾವಣೆ ಮಾಡಬೇಕು. ಶಿಕ್ಷಣ ಯಾವ ರೀತಿ ಇರಬೇಕು, ಯಾತಕ್ಕಾಗಿ ಶಿಕ್ಷಣ ಎಂಬ ಮೂಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಜಗತ್ತು ಬದಲಾಗುತ್ತಿದೆ. ಅದಕ್ಕೆ ತಕ್ಕ ಹಾಗೆ ನಾವು ಕೂಡ ಬದಲಾವಣೆ ತಂದುಕೊಳ್ಳಬೇಕು. ಪ್ರತಿಯೊಬ್ಬ ಗುರುವೂ ವಿದ್ಯಾರ್ಥಿ ಸ್ವರೂಪವನ್ನು ಪಡೆದುಕೊಳ್ಳಬೇಕು. ಸಾಯುವವರೆಗೂ ನಾವು ವಿದ್ಯಾರ್ಥಿಗಳೇ ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರಕ್ಕೆ 25 ಸಾವಿರ ಕೋಟಿ ರೂ. ಅನುದಾನ ಬಜೆಟ್ ನಲ್ಲಿ ನೀಡಲಾಗಿದೆ. 19 ಸಾವಿರ ಕೋಟಿ ರೂ. ಶಿಕ್ಷಕರ ಸಂಬಳ, 5,000 ಕೋಟಿ ರೂ. ಶಾಲೆಗಳ ಅಭಿವೃದ್ಧಿಗಾಗಿ ನೀಡಲಾಗಿದೆ. ಒಂದೇ ವರ್ಷದಲ್ಲಿ 8,101 ಶಾಲಾ ಕೊಠಡಿಗಳನ್ನು ನಿರ್ಮಿಸುವ ರಾಜ್ಯದ ಇತಿಹಾಸದಲ್ಲೇ ಮೊದಲು. 23 ಸಾವಿರ ಶಾಲಾ ಕೊಠಡಿಗಳನ್ನು ಪುನಃ ನಿರ್ಮಿಸಬೇಕಾಗಿದ್ದು, ಪ್ರಥಮ ಹಂತದಲ್ಲಿ 8101 ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಉತ್ತಮ ಶಾಲೆಗಳಿದ್ದರೂ, ಉತ್ತಮ ಶಾಲಾ ಕೊಠಡಿಗಳು ಇಲ್ಲದಿದ್ದ ಕಾರಣ , ಈ ದಾಖಲೆಯ ಕಾರ್ಯಕ್ರಮವನ್ನು ಮಾಡಲಾಗಿದೆ ಎಂದರು.
ಶೌಚಾಲಯ ವ್ಯವಸ್ಥೆಯಿಲ್ಲದ ಕಾರಣ ಮಕ್ಕಳು ಶಾಲೆಗೆ ಬರುವುದನ್ನು ನಿಲ್ಲಿಸಿರುವುದನ್ನು ಗಮನಿಸಿ, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಹೆಣ್ಣು ಮಕ್ಕಳಿಗೆ ಹಾಗೂ ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳನ್ನು ಪ್ರತ್ಯೇಕವಾಗಿ ಒಂದೇ ವರ್ಷದಲ್ಲಿ ನಿರ್ಮಿಸುವ ಯೋಜನೆಯನ್ನು ರೂಪಿಸಲಾಗಿದೆ. ಆಗಸ್ಟ್ 15 ರಂದು ಈ ಯೋಜನೆಯನ್ನು ಘೋಷಿಸಲಾಗಿದ್ದು, ಮುಂದಿನ ಆಗಸ್ಟ್ 15 ರೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. 4,000 ಅಂಗನವಾಡಿ ಕೇಂದ್ರಗಳನ್ನು ಮುಂದಿನ ಆಗಸ್ಟ್ 15 ರೊಳಗೆ ನಿರ್ಮಿಸಲಾಗವುದು. 15,000 ಶಿಕ್ಷಕರ ನೇಮಕಾತಿ ಮಾಡುವ ಮೂಲಕ ಶಿಕ್ಷಣ ಕಾರ್ಯದೊತ್ತಡ ಕಡಿಮೆಗೊಳಿಸಲಾಗುವುದು ಎಂದು ತಿಳಿಸಿದರು.










