ಎಸಿಬಿ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ…

71
firstsuddi

ಬೆಂಗಳೂರು : ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶದ ಹಿನ್ನೆಲೆ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ.

ಆಗಸ್ಟ್ 11 ರಂದು ಎಸಿಬಿ ರದ್ದು ಮಾಡಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಇದೀಗ ಹೈಕೋರ್ಟಿನ ತೀರ್ಪನ್ನು ಸರ್ಕಾರ ಅನುಷ್ಠಾನಗೊಳಿಸಿದೆ. 2016ರ ಮಾರ್ಚ್ 19 ರಂದು ಎಸಿಬಿಯನ್ನು ಸಿದ್ದರಾಮಯ್ಯ ಸರ್ಕಾರ ರಚಿಸಿತ್ತು.

ಆದೇಶದಲ್ಲಿ ಏನಿದೆ?:
ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಭ್ರಷ್ಟಾಚಾರ ನಿಗ್ರಹ ರದ್ದುಗೊಳಿಸಿರುವ ಆದೇಶವನ್ನು ಅನುಷ್ಕಾನಗೊಳಿಸಲಾಗುತ್ತಿದೆ. ಉಚ್ಚ ನ್ಯಾಯಾಲಯದ ಆದೇಶದನ್ವಯ ಸರ್ಕಾರದ ಅಧಿಸೂಚನೆ ಪ್ರಕಾರ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಭ್ರಷ್ಟಾಚಾರ ತಡೆ ಅಧಿನಿಯಮ 1988ರ ಉಪಬಂಧಗಳಡಿ ನೀಡಲಾಗಿದ್ದ ತನಿಖಾಧಿಕಾರವನ್ನು ಹಾಗೂ ದಂಡ ಪ್ರಕ್ರಿಯಾ ಸಂಹಿತೆ 1973ರ ಉಪಬಂಧ 2(ಎಸ್)ರನ್ವಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ, ಪೊಲೀಸ್ ಠಾಣಾಧಿಕಾರವನ್ನು ನೀಡಿ ಆದೇಶಿಸಿದೆ.

ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿರುವುದರಿಂದ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೀಡಲಾಗಿದ್ದ ತನಿಖಾಧಿಕಾರ, ಪೊಲೀಸ್ ಠಾಣೆಗಳೆಂದು ಘೋಷಿಸಿ ರಾಜ್ಯವ್ಯಾಪ್ತಿ ಅಧಿಕಾರ ನೀಡಿರುವ ಆದೇಶಗಳನ್ನು ಹಿಂಪಡೆದಿರುವುದರಿಂದ ಭಷ್ಟಾಚಾರ ನಿಗ್ರಹ ದಳದಲ್ಲಿ ಪ್ರಸ್ತುತ ಬಾಕಿಯಿರುವ ತನಿಖೆಗಳು, ವಿಚಾರಣೆಗಳು, ಇತರ ಶಿಸ್ತು ಪ್ರಕರಣಗಳು ಹಾಗೂ ಖಾಸಗಿ ದೂರುದಾರರ ಪ್ರಕರಣಗಳನ್ನು ಸಂಪೂರ್ಣವಾಗಿ ಲೋಕಾಯುಕ್ತ ಸಂಸ್ಥೆಗೆ ವರ್ಗಾಯಿಸುವುದು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.