ಲಕ್ನೋ: ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜಿಂಗ್ ನಲ್ಲಿ ಇರಿಸಲಾಗಿದ್ದ ಮೊಬೈಲ್ ಬ್ಯಾಟರಿ ಸ್ಫೋಟಗೊಂಡು 8 ತಿಂಗಳ ಮಗುವೊಂದು ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ನೇಹಾ(8 ತಿಂಗಳು) ಸಾವನ್ನಪ್ಪಿದ ಮಗು.
ಮೃತ ಮಗು ನೇಹಾ ತಾಯಿ ಮಗುವನ್ನು ಮಂಚದ ಮೇಲೆ ಮಲಗಿಸಿ ಬಟ್ಟೆ ಒಗೆಯಲು ಹೋಗಿದ್ದರು. ಅಲ್ಲೇ ಪಕ್ಕಕ್ಕೆ ಮೊಬೈಲ್ ನ್ನು ಚಾರ್ಜ್ಗೆ ಹಾಕಿಟ್ಟು ಹೋಗಿದ್ದರು. ಆದರೆ ಲಾವಾ ಮೊಬೈಲ್ ಕೆಲ ಸಮಯದ ನಂತರ ಸ್ಫೋಟಗೊಂಡಿದೆ. ಆಗ ದೊಡ್ಡ ಶಬ್ದ ಮತ್ತು ಅಳುವನ್ನು ಕೇಳಿದ ತಾಯಿ ಮಗುವಿನ ಬಳಿ ಓಡಿ ಬಂದಿದ್ದಾರೆ. ಒಳಗೆ ಬರುವಷ್ಟರಲ್ಲಿ ಮಗುವಿನ ಕೈ ಮತ್ತು ಬೆನ್ನು ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾದರೂ, ಚಿಕಿತ್ಸೆ ಫಲಕಾರಿಯಾಗದೆ ನೇಹಾ ಸಾವನ್ನಪ್ಪಿದ್ದಾಳೆ.










