ಒಂದೂವರೆ ಅಡಿ ನೀರಲ್ಲಿ ನಿಮ್ಮನ್ನು ಬೋಟಲ್ಲಿ ಕರ್ಕೊಂಡ್ ಹೋಗಿದ್ದ ಪುಣ್ಯಾತ್ಮ ಯಾರಪ್ಪ? – ಸಿದ್ದು ಕಾಲೆಳೆದ ಬೊಮ್ಮಾಯಿ.

57
firstsuddi

ಬೆಂಗಳೂರು : ರಾಜಧಾನಿಯಲ್ಲಿ ಭಾರೀ ಮಳೆಯಿಂದ ಉಂಟಾದ ನೆರೆ ಪೀಡಿತ ಪ್ರದೇಶಗಳಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೋಟ್ ನಲ್ಲಿ ಭೇಟಿ ನೀಡಿದ ಪ್ರಸಂಗ ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ವಿಧಾನಸಭೆಯಲ್ಲಿ ರಾಜ್ಯದಲ್ಲಿನ ಅತಿವೃಷ್ಟಿ ಸಂಬಂಧ ನಿಯಮ 69ರಡಿ ಚರ್ಚೆ ನಡೆಯಿತು. ಈ ವೇಳೆ ನಗರದಲ್ಲಿ ಮಳೆ ಅವಾಂತರಗಳ ಕುರಿತು ಸಿದ್ದರಾಮಯ್ಯ ಅವರು ಮಾತನಾಡುತ್ತ ಮಳೆ ಹಾನಿ ಪೀಡಿತ ಪ್ರದೇಶ ಮಹದೇವಪುರಕ್ಕೆ ಹೋಗಿದ್ದೆ. ಅಲ್ಲಿ ಬೋಟ್ ನಲ್ಲೇ ತಿರುಗಾಡಬೇಕಾಯಿತು ಎಂದರು. ಈ ವೇಳೆ, ಬಿಜೆಪಿ ಸದಸ್ಯ ಅರವಿಂದ್ ಲಿಂಬಾವಳಿ, ರಸ್ತೆ ಇತ್ತು. ಆದರೆ ನೀವು ಏಕೆ ಬೋಟ್ ನಲ್ಲಿ ಹೋಗಿದ್ರಿ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಿದ್ದು, ನೀವು ಬರೋದಾಗಿ ಹೇಳಿದ್ರೆ ನಾನೇ ವೆಲ್ ಕಮ್ ಮಾಡ್ತಿದ್ದೆ. ರಸ್ತೆ ತೋರಿಸಬಹುದಿತ್ತು ಎಂದು ತಿರುಗೇಟು ಕೊಟ್ಟರು. ಅದಕ್ಕೆ ಲಿಂಬಾವಳಿ ಪ್ರತಿಕ್ರಿಯಿಸಿ, ನಿಮ್ಮನ್ನ ದಿಕ್ಕು ತಪ್ಪಿಸೋರು ತುಂಬಾ ಜನ ಇದಾರೆ, ಹುಷಾರಾಗಿರಿ ಸಾರ್ ಎಂದು ಕಾಲೆಳೆದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಸಿಎಂ ಬೊಮ್ಮಾಯಿ ಒಂದೂವರೆ ಅಡಿ ನೀರಿರುವ ಜಾಗದಲ್ಲಿ ನಿಮ್ಮನ್ನು ಬೋಟಲ್ಲಿ ಕರ್ಕೊಂಡ್ ಹೋಗಿದ್ದ ಪುಣ್ಯಾತ್ಮ ಯಾರಪ್ಪ? ನಾವೆಲ್ಲ ರಸ್ತೆಯಲ್ಲೇ ಹೋಗಿದ್ದು ಎಂದು ಸಿದ್ದು ಕಾಲೆಳೆದರು.

ಮಾಧ್ಯಮದಲ್ಲಿ ನೋಡಿದೆ ಮೊಣಕಾಲುವರೆಗೆ ನೀರಿತ್ತು ಎಂದು ಸಿಎಂ ಹೇಳಿದ್ದಕ್ಕೆ ಸಿದ್ದರಾಮಯ್ಯ, ಹೋಗಿ ಜನರನ್ನು ಭೇಟಿ ಮಾಡೋಣ. ಅವರು ಒಂದೂವರೆ ಅಡಿ ಇತ್ತು ಎಂದರೆ ನೀವು ಹೇಳಿದ ಹಾಗೆ ಕೇಳೋಣ ಎಂದು ಸವಾಲು ಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಾನು ಮೂರು ಫೀಟ್ ಇದ್ದಾಗ ನಡೆದುಕೊಂಡು ಹೋಗಿದ್ದೇನೆ. ನಿಮಗೆ ಯರೋ ಮಿಸ್ ಗೈಡ್ ಮಾಡಿರಬಹುದು ಎಂದರು.ಇದಕ್ಕೆ ಸಿದ್ದರಾಮಯ್ಯ, ನಾನು ನನ್ನ ಸ್ವಂತ ಬೋಟ್ ನಲ್ಲಿ ಹೋಗಿಲ್ಲ. ಅದು ಎನ್ ಡಿಆರ್ ಎಫ್ ಬೋಟ್. ನಾನು ಹೋದ ದಿನ ಐದು ಫೀಟ್ ನೀರು ಇತ್ತು. ಎಸ್ ಡಿಆರ್ ಎಫ್ ಸಿಬ್ಬಂದಿ ಮೋಟಾರು ಎಳೆದೇ ಓಡಿಸಿದರು. ಒಂದೂವರೆ ಅಡಿ ನೀರು ಇತ್ತು ಎಂಬುದು ಸರಿಯಲ್ಲ ಎಂದರು.