ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು : ಕೆ.ಎನ್.ರಮೇಶ್.

82
firstsuddi

ಚಿಕ್ಕಮಗಳೂರು : ವಿದ್ಯಾರ್ಥಿಗಳು ತಮ್ಮ ಸರ್ವಾಂಗೀಣ ಬೆಳವಣಿಗೆಯ ದೃಷ್ಠಿಯಿಂದ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸಲಹೆ ನೀಡಿದರು.

ನಗರದ ಎಂಇಎಸ್ ಪದವಿಪೂರ್ವ ಕಾಲೇಜಿನಲ್ಲಿ ಇಂದು ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಪಿಯುಸಿ ಶಿಕ್ಷಣದ ಮತ್ತು ಬದುಕಿನ ಮಹತ್ತರವಾದ ಘಟ್ಟ, ಅಲ್ಲಿ ಯಶಸ್ವಿಯಾದರೆ ಮಾತ್ರ ಜೀವನದ ಗುರಿ ಸಾಧಿಸಲು ಸಾಧ್ಯವಾಗುತ್ತದೆ, ಪದವಿ ಪೂರ್ವ ಶಿಕ್ಷಣದ ವೇಳೆ ಗುರಿ ಸಾಧಿಸಲು ಸಾಕಷ್ಟು ಅವಕಾಶವಿರುತ್ತದೆ, ಅದನ್ನು ಜಾರಿ ಹೋಗಲು ಬಿಡದೆ ಶ್ರದ್ದೆ, ಛಲ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಪಿಯುಸಿಯಲ್ಲಿ ವಿಫಲರಾದರೆ ಅಷ್ಟೂ ವರ್ಷದ ಸಾಧನೆ ಮತ್ತು ಪ್ರಯತ್ನ ವಿಫಲವಾಗುತ್ತದೆ, ಹೀರೊ ಆಗಬಯಸಿದ್ದ ನೀವು ಜೀರೊ ಆಗುತ್ತೀರಿ ಎಂದ ಅವರು ವಿದ್ಯಾರ್ಥಿಗಳು ಆಸೆ, ಕನಸು ಮತ್ತು ಗುರಿಯನ್ನು ಹೊಂದಿರಬೇಕು, ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡಿರಬೇಕು, ನಕಾರಾತ್ಮಕ ಚಿಂತನೆಗಳನ್ನು ಬಿಡಬೇಕು, ನನ್ನಿಂದ ಅಸಾಧ್ಯ ಎಂಬ ಭಾವನೆಯನ್ನು ಬಿಟ್ಟು ನನ್ನಿಂದ ಎಲ್ಲವೂ ಸಾಧ್ಯ ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯಕುಮಾರ್ ಮಾತನಾಡಿ ನಮ್ಮ ಅಭಿವೃದ್ದಿ ಮತ್ತು ಏಳಿಗೆ ನಮ್ಮ ಕೈಯಲ್ಲೇ ಇದೆ ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎನ್.ಕೇಶವಮೂರ್ತಿ ವಿದ್ಯಾರ್ಥಿಗಳು ಶಿಕ್ಷಣವಂತರಾಗುವುದರ ಜೊತೆಗೆ ಸಂಸ್ಕಾರವಂತರೂ ಆಗಬೇಕು ಎಂದು ಸಲಹೆ ಮಾಡಿದರು.

ಕಾಲೇಜಿನ ಪ್ರಾಚಾರ್ಯೆ ಎಂ.ಬಿ.ಜಯಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿದರು.ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಟ್ಟಾನಾಯ್ಕ, ಕಾಲೇಜಿನ ಸಹಕಾರ್ಯದರ್ಶಿ ಎಸ್.ಶಂಕರನಾರಾಯಣ ಭಟ್, ಉಪಾಧ್ಯಕ್ಷೆ ರಾಧಾ ಸುಂದರೇಶ್, ಕಛೇರಿ ವ್ಯವಸ್ಥಾಪಕಿ ಶ್ರೀಲಕ್ಷ್ಮೀ, ವಾಣಿಜ್ಯ ವಿಭಾಗದ ಮುಖ್ಯಸ್ಥ ಕೆ.ಎನ್.ಮಂಜುನಾಥ ಭಟ್, ಉಪನ್ಯಾಸಕರಾದ ಯೋಗೀಶ್, ಹೆಚ್.ಕೆ.ಸುಭಾಶ್, ಎಸ್.ನಂದಿನಿ ಉಪಸ್ಥಿತರಿದ್ದರು.