ಮೂಡಿಗೆರೆ : ಮೂಡಿಗೆರೆ-ಸಕಲೇಶಪುರ ಸಂಪರ್ಕಿಸುವ ಸುಮಾರು 80 ವರ್ಷದ ಹಿಂದಿನ ಬೆಟ್ಟದಮನೆ ಸೇತುವೆ ಮಧ್ಯ ಭಾಗದಲ್ಲಿ ಭೂ ಕುಸಿತ ಉಂಟಾಗಿದ್ದು, ವಾಹನ ಸವಾರರು ಭಯದಿಂದ ವಾಹನ ಚಾಲನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಭೂಕುಸಿತಗೊಂಡ ಪರಿಣಾಮ ಬಸ್ ಲಾರಿ ಮುಂತಾದ ದೊಡ್ಡ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಸ್ಥಳೀಯರಾದ ಜಾಣಿಗೆ ಮೋಹನ್ ಅವರು, ಶಿಥಿಲಗೊಂಡು ಗುಂಡಿ ಬಿದ್ದಿರುವ ಸೇತುವೆಯನ್ನು ಕುಸಿಯುವ ಮುನ್ನ ಎಚ್ಚೆತ್ತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಹಾನುಬಾಳು, ಸಕಲೇಶಪುರ, ಮಡಿಕೇರಿ ತೆರಳುವ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೂಡಲೇ ಈ ಬಗ್ಗೆ ಪರಿಶಿಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.










