ಚೆನ್ನೈ : ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳಾ ಸಾಫ್ಟ್ವೇರ್ ಉದ್ಯೋಗಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಚೆನ್ನೈನ ಐಟಿ ಕಾರಿಡಾರ್ ನ ನವಲೂರಿನಲ್ಲಿರುವ ಹೆಚ್ ಸಿಎಲ್ ನಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರಪ್ರದೇಶದ ಚಿತ್ತೂರಿನ 23 ವರ್ಷದ ಎಸ್.ಲಾವಣ್ಯ ಮತ್ತು ಕೇರಳದ ಪಾಲಕ್ಕಾಡ್ ನ ಆರ್.ಲಕ್ಷ್ಮಿ ಮೃತರೆಂದು ತಿಳಿದುಬಂದಿದೆ.
ಬುಧವಾರ ರಾತ್ರಿ 11:30ರ ಸುಮಾರಿಗೆ ಕಂಪೆನಿಯಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರು ಇವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಇಬ್ಬರು ಯುವತಿಯರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕ ಮೋತಿಶ್ ಕುಮಾರ್ ನನ್ನು (20) ಬಂಧಿಸಲಾಗಿದೆ. ಹೋಂಡಾ ಸಿಟಿ ಕಾರು ಈ ಸಂದರ್ಭದಲ್ಲಿ ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುತ್ತಿತ್ತು ಎಂದು ತಿಳಿದು ಬಂದಿದೆ.










