ಚಂಡೀಗಢ: ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಢ ವಿಶ್ವವಿದ್ಯಾಲಯವನ್ನು ಶನಿವಾರ(ಸೆ.24)ದವರೆಗೆ ಬಂದ್ ಮಾಡಲಾಗಿದೆ. ಅಲ್ಲದೆ, ಚಂಡೀಗಢ ವಿಶ್ವವಿದ್ಯಾಲಯದ ಆಡಳಿತವು ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಬಾಲಕಿಯರ ಹಾಸ್ಟೆಲ್ ವಾರ್ಡನ್ ರಾಜ್ವಿಂದರ್ ಕೌರ್ ಅವರನ್ನು ಅಮಾನತುಗೊಳಿಸಿದೆ. ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ.
ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೋಗಳನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಹಿಮಾಚಲ ಪ್ರದೇಶದ ಇಬ್ಬರು ಯುವಕರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದು, ಹುಡುಗರಿಗೆ ವಿಡಿಯೋ ಕಳುಹಿಸಿದ ವಿವಿ ವಿದ್ಯಾರ್ಥಿನಿ ಸೇರಿದಂತೆ ಮೂವರನ್ನು ಈ ಪ್ರಕರಣದಲ್ಲಿ ಬಂಧಿಸಿದಂತಾಗಿದೆ. ಇಬ್ಬರು ಆರೋಪಿಗಳನ್ನು ಸನ್ನಿ ಮೆಹ್ತಾ ಮತ್ತು ರಂಕಜ್ ವರ್ಮಾ ಎಂದು ಗುರುತಿಸಲಾಗಿದ್ದು, ಇವರನ್ನು ನಿನ್ನೆ ಶಿಮ್ಲಾದಲ್ಲಿ ಬಂಧಿಸಲಾಗಿದೆ. ಹಿಮಾಚಲ ಪೊಲೀಸರು ಮೊದಲು ಇಬ್ಬರೂ ಆರೋಪಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಪಂಜಾಬ್ ಪೊಲೀಸ್ ತಂಡಕ್ಕೆ ಹಸ್ತಾಂತರಿಸಿದೆ.
ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಯುವತಿಯರ ಸ್ನಾನದ ವಿಡಿಯೋ ರೆಕಾರ್ಡ್ ಮಾಡಿ ಹುಡುಗರಿಗೆ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪಂಜಾಬ್ ನ ಮೊಹಾಲಿಯಲ್ಲಿರುವ ಚಂಡೀಗಢ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಶನಿವಾರ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದ್ದರು. ಆದರೆ ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಈ ಆರೋಪಗಳನ್ನು ಅಲ್ಲಗಳೆದಿದ್ದು, ಬಂಧಿತ ವಿದ್ಯಾರ್ಥಿನಿಯ ವಿಡಿಯೋ ಮಾತ್ರ ಶೇರ್ ಆಗಿದೆ ಎಂದು ಹೇಳಿದೆ.
ಹಲವಾರು ಮಹಿಳಾ ವಿದ್ಯಾರ್ಥಿಗಳ ಆಕ್ಷೇಪಾರ್ಹ ವಿಡಿಯೋಗಳನ್ನು ಹಾಸ್ಟೆಲ್ ನಲ್ಲಿ ರೆಕಾರ್ಡ್ ಮಾಡಲಾಗಿದೆ ಎಂಬ ಆರೋಪದ ಮೇಲೆ ಮುಖ್ಯಮಂತ್ರಿ ಭಗವಂತ್ ಮಾನ್ ತನಿಖೆಗೆ ಆದೇಶಿಸಿದ್ದಾರೆ.










