ಚಿಕ್ಕಮಗಳೂರು : ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಸಧೃಡರಾಗಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಮಂಜುನಾಥ್ ಹೇಳಿದರು.
ನಗರದ ಜಿಲ್ಲಾ ಆಟದ ಮೈದಾನದಲ್ಲಿ ಅತಿಥೇಯ ಶಾಲೆ ವಾಸವಿ ವಿದ್ಯಾ ಸಂಸ್ಥೆ ಇಂದು ಆಯೋಜಿಸಿದ್ದ ನಗರ 1 ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವುದರಿಂದ ಸರ್ವಾಂಗೀಣವಾಗಿ ಬೆಳೆಯಬಹುದು, ಕ್ರೀಡಾ ಪಟುಗಳಾಗುವುದರಿಂದ ನಿರೋಗಿಗಳಾಗಿ ಬಾಳಬಹುದು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಬೆಳೆಯಬೇಕಾದರೆ ಆ ವಲಯದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಅಂತರಾಷ್ಟ್ರೀಯ ಕ್ರೀಡಾಪಟುಗಳನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪಿ.ಎಸ್.ವೆಂಕಟೇಶ್ ವಿದ್ಯಾರ್ಥಿಗಳು ಕ್ರೀಡಾ ಕೂಟದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು, ಸೋಲನ್ನು ಸವಾಲಾಗಿ ತೆಗೆದುಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ವಾಸವಿ ವಿದ್ಯಾ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಎಂ.ಆರ್.ರಾಜಶೇಖರ್ ಕ್ರೀಡಾ ಜ್ಯೋತಿ ಸ್ವೀಕರಿಸಿದರು, ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷಕ ಛಲವಾದಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ವಾಸವಿ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಜಿ.ಎ.ದಿನೇಶ್ ಗುಪ್ತಾ, ಕಾರ್ಯದರ್ಶಿ ಜಯಂತಿ ಶೇಖರ್, ಪ್ರಾಂಶುಪಾಲ ಬಿ.ಆರ್.ಕುಮಾರ್, ಹಿರಿಯ ಶಿಕ್ಷಕ ರಮೇಶ್ ಬೊಂಗಾಳೆ, ದೈಹಿಕ ಶಿಕ್ಷಕ ದಿನೇಶ್, ಶಿಕ್ಷಣ ಇಲಾಖೆಯ ಸಿಆರ್ಪಿ ರಮ್ಯಶ್ರೀ, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ದೇವರಾಜ್, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಯ್ಯ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ಪ ಉಪಸ್ಥಿತರಿದ್ದರು.
19 ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಕ್ರೀಡಾ ಕೂಟದಲ್ಲಿ ಪಾಲ್ಗೊಂಡಿದ್ದರು.










