ನವದೆಹಲಿ : ಕಳೆದ ಹತ್ತು ದಿನಗಳಿಂದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಕುರಿತಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಇಂದು ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ. ಹಿಜಾಬ್ ಪರ ವಕೀಲರು ಮತ್ತು ಸರ್ಕಾರದ ಪರ ವಕೀಲರ ವಾದ ಮಂಡನೆ ಇಂದು ಮುಕ್ತಾಯವಾಗಿದೆ.
ಇಂದು ಬೆಳಿಗ್ಗೆ ವಿಚಾರಣೆ ಆರಂಭವಾದಾಗ ಹಿರಿಯ ವಕೀಲ ದುಷ್ಯಂತ್ ದವೆ ಅವರು ಅರ್ಜಿದಾರರ ಪರ ವಾದ ಮಂಡಿಸಿದರು. ಸುತ್ತೋಲೆಯೊಂದನ್ನು ನ್ಯಾಯಾಲಯದ ಮುಂದಿಟ್ಟ ದವೆ, ಈ ಸುತ್ತೋಲೆಯಲ್ಲಿ ತುಂಬಾ ಕುತೂಹಲಕರವಾದ ವಿಷಯಗಳಿವೆ ಎಂದರು. ಸುತ್ತೋಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಬಗ್ಗೆ ಯಾವುದೇ ಉಲ್ಲೇಖವಿಲ್ಲ.. ಆದರೆ ಸಾಲಿಸಿಟರ್ ಜನರಲ್ ಅವರು ಆ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಲು ನಾನು ವಿಷಾದಿಸುತ್ತೇನೆ. ಆದರೆ ಆ ವಿಷಯ ಪ್ರಸ್ತುತವಲ್ಲ ಮತ್ತು ಅವರು ಅದನ್ನು ಎತ್ತಿದ್ದರಿಂದ ಇಡೀ ಮಾಧ್ಯಮಗಳು ಅದನ್ನು ಪ್ರಸಾರ ಮಾಡತೊಡಗಿದವು ಎಂದರು.
ಈ ಪ್ರಕರಣದ ನಿನ್ನೆಯ ವಿಚಾರಣೆಯಲ್ಲಿ, ಹಿಜಾಬ್ ಪ್ರತಿಭಟನೆ ದೊಡ್ಡ ಪಿತೂರಿಯ ಭಾಗವಾಗಿದೆ ಮತ್ತು ವಿದ್ಯಾರ್ಥಿಗಳು ಪಿಎಫ್ಐ ಸಲಹೆಯಂತೆ ವರ್ತಿಸುತ್ತಿದ್ದಾರೆ. ಈ ಪ್ರತಿಭಟನೆಯ ಹಿಂದೆ ಪಿಎಫ್ಐ ಪಾತ್ರ ಇದೆ ಎಂದು ತುಷಾರ್ ಮೆಹ್ತಾ ಕೋರ್ಟ್ ಗೆ ತಿಳಿಸಿದ್ದರು.
ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದವು.










