ವಾಷಿಂಗ್ಟನ್: ಹಿಜಾಬ್ ಹಾಕಿಕೊಳ್ಳಲು ಅಮೆರಿಕದ ಮಹಿಳಾ ಪತ್ರಕರ್ತೆಯೊಬ್ಬರು ನಿರಾಕರಿಸಿದ ಕಾರಣ, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಂದರ್ಶನವನ್ನು ರದ್ದುಗೊಳಿಸಿದ್ದಾರೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅಮೆರಿಕದ ಪತ್ರಕರ್ತೆ ಜೊತೆ ಸಂದರ್ಶನದಲ್ಲಿ ಭಾಗಿಯಾಗಬೇಕಾಗಿತ್ತು. ಆದರೆ, ಪತ್ರಕರ್ತೆ ಹಿಜಾಬ್ ಹಾಕಿಲ್ಲ ಎಂಬ ಕಾರಣಕ್ಕಾಗಿ ಸಂದರ್ಶನ ರದ್ದುಗೊಳಿಸಿದ್ದಾರೆ. ಅಂತಾರಾಷ್ಟ್ರೀಯ ಸುದ್ದಿವಾಹಿನಿ ನಿರೂಪಕಿ ಕ್ರಿಸ್ಟಿಯಾನೆ ಅಮನ್ಪೋರ್ ಜೊತೆ ಇಬ್ರಾಹಿಂ ರೈಸಿ ದಿಢೀರ್ ಆಗಿ ಸಂದರ್ಶನ ರದ್ದುಗೊಳಿಸಿದ್ದು, ಇದಕ್ಕೆ ಅವರು ಹಿಜಾಬ್ ಧರಿಸದಿರುವುದೇ ಕಾರಣ ಎನ್ನಲಾಗಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77ನೇ ಅಧಿವೇಶನ ನಡೆಯುತ್ತಿದ್ದು, ಅದರಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಭಾಗಿಯಾಗಿದ್ದರು. ಇದರ ಬೆನ್ನಲ್ಲೇ ಅವರು ಸಂದರ್ಶನವೊಂದಕ್ಕೆ ಅವರನ್ನು ಆಹ್ವಾನಿಸಲಾಗಿತ್ತು.
ಇರಾನ್ ಅಧ್ಯಕ್ಷ ಇಬ್ರಾಹಿಂಗಾಗಿ ಸುಮಾರು 40 ನಿಮಿಷಗಳ ಕಾಲ ಕಾಯಲಾಗಿತ್ತು, ಬಳಿಕ ಹಿಜಾಬ್ ಧರಿಸುವಂತೆ ಸಹಾಯಕರ ಬಳಿ ಹೇಳಿ ಕಳುಹಿಸಿದ್ದರು, ಆದರೆ ನಾನು ನಿರಾಕರಿಸಿದೆ, ಹಾಗಾಗಿ ಅವರು ಇಂಟರ್ ವ್ಯೂ ನೀಡದೆ ಹೋಗಿದ್ದಾರೆ. ನ್ಯೂಯಾರ್ಕ್ ನಲ್ಲಿ ಹಿಜಾಬ್ ಗೆ ಸಂಬಂಧಿಸಿದಂತೆ ಯಾವುದೇ ನಿಯಮವಿಲ್ಲ ಎಂದು ನಿರೂಪಕಿ ಹೇಳಿದ್ದಾರೆ.
ಹಿಜಾಬ್ ನನ್ನು ಸರಿಯಾಗಿ ಧರಿಸದ ಕಾರಣಕ್ಕೆ ನೈತಿಕ ಪೊಲೀಸರಿಂದ ಯುವತಿ ಬಂಧನಕ್ಕೊಳಗಾಗಿ, ಮೃತಪಟ್ಟಿರುವ ಘಟನೆ ಇರಾನ್ ನಲ್ಲಿ ಇತ್ತೀಚೆಗೆ ನಡೆದಿತ್ತು. ಇದನ್ನು ಖಂಡಿಸಿ ಮಹಿಳೆಯರು ಬೀದಿಗಿಳಿದಿದ್ದು, ತಮ್ಮ ಕೂದಲನ್ನು ಕತ್ತರಿಸಿ, ಹಿಜಾಬ್ ನ್ನು ತೆಗೆಯುವ ಮೂಲಕ ಪ್ರತಿಭಟನೆ ನಡೆಸಿದ್ದರು.










