ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆಯಲ್ಲಿ ಮೋದಿ ಭಾಗಿ…

61
firstsuddi

ಟೋಕಿಯೋ: ಜಪಾನ್ ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಸರ್ಕಾರಿ ಅಂತ್ಯಕ್ರಿಯೆ ಇಂದು ನೆರವೇರಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಜಾಗತಿಕ ನಾಯಕರು ಅಬೆ ಅವರ ಸರ್ಕಾರಿ ಅಂತ್ಯಸಂಸ್ಕಾರದಲ್ಲಿ ಅಂತಿಮ ನಮನ ಸಲ್ಲಿಸಿದರು.

ಶೋಕದ ಸಂಕೇತವಾಗಿ ಕಪ್ಪು ಉಡುಗೆ ಧರಿಸಿದ್ದ ಗಣ್ಯರು, ಟೋಕಿಯೋದ ಬುಡೋಖ್ ಹಾಲ್ ನಲ್ಲಿ ನೆರೆದಿದ್ದರು. ಶಿಂಜೋ ಅಬೆ ಅವರ ಪತ್ನಿ ಅಕೀ ಅವರು ಅಬೆ ಅವರ ಚಿತಾಭಸ್ಮವನ್ನು ಸಭಾಂಗಣಕ್ಕೆ ತಂದಾಗ 19 ಸುತ್ತಿನ ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.

ಜುಲೈ 8 ರಂದು ನಾರಾ ನಗರದಲ್ಲಿ ಪ್ರಚಾರ ಭಾಷಣದ ವೇಳೆ ದಾಳಿಗೊಳಗಾದ ಅಬೆ ನಂತರ ನಿಧನರಾಗಿದ್ದರು. ಶಿಂಜೋ ಅಬೆ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವನ್ನು ಜುಲೈ 11ರಂದು ನಡೆಸಲಾಗಿತ್ತು. ಬೌದ್ಧ ಧರ್ಮದ ವಿಧಿ ವಿಧಾನಗಳಿಗೆ ಅನುಗುಣವಾಗಿ ನಡೆದ ಅಂತ್ಯಕ್ರಿಯೆಯಲ್ಲಿ ಅಬೆ ಅವರ ಕುಟುಂಬ, ಎಲ್ ಡಿಪಿಯ ಕೆಲವು ನಾಯಕರು ಭಾಗಿಯಾಗಿದ್ದರು.

ಜುಲೈ 14ರಂದು ಪ್ರಧಾನಿ ಫುಮಿಯೋ ಕಿಶಿಡಾ ಅವರ ಸಂಪುಟವು ಅಬೆ ಅವರಿಗೆ ಸೆ. 27ರಂದು ಸರ್ಕಾರಿ ಅಂತ್ಯಕ್ರಿಯೆ ಗೌರವ ಸಲ್ಲಿಸಲು ನಿರ್ಧಾರ ತೆಗೆದುಕೊಂಡಿತ್ತು.

ತಮ್ಮ ಆತ್ಮೀಯ ಗೆಳೆಯ, ಜಪಾನಿನ ದಿವಂಗತ ಪ್ರಧಾನಿ ಶಿಂಜೋ ಅಬೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹೃದಯಪೂರ್ವಕ ಸಂತಾಪ ಸೂಚಿಸಿದ್ದಾರೆ. ಅಬೆ ಅವರ ಸರ್ಕಾರಿ ಅಂತ್ಯಕ್ರಿಯೆಗೆ ಪಾಲ್ಗೊಳ್ಳಲು ಇಂದು ಟೋಕಿಯೋಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಜಪಾನ್ ಪ್ರಧಾನಿ ಫುಮಿಯೋ ಕಿಶಿಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇಂದು ನಾವು ದುಃಖದ ಸಮಯದಲ್ಲಿ ಭೇಟಿಯಾಗುತ್ತಿದ್ದೇವೆ. ಕಳೆದ ಬಾರಿ ನಾನಿಲ್ಲಿಗೆ ಬಂದಾಗ ಮಾಜಿ ಪ್ರಧಾನಿ ಶಿಂಜೊ ಅಬೆ ಅವರೊಂದಿಗೆ ಸುದೀರ್ಘವಾಗಿ ಮಾತುಕತೆ ನಡೆಸಿದ್ದೆ. ಭಾರತವು ಶಿಂಜೊ ಅಬೆ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ ಎಂದು ಮೋದಿ ಸ್ಮರಿಸಿದರು.