ನಟಿ ಆಶಾ ಪಾರೇಖ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ…

67
firstsuddi

ಭಾರತೀಯ ಚಿತ್ರರಂಗದ ಹಿರಿಯ ನಟಿ ಆಶಾ ಪಾರೇಖ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದೆ. ಭಾರತೀಯ ಸಿನಿಮಾ ರಂಗಕ್ಕೆ ಆಶಾ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ‘ಪದ್ಮಶ್ರೀ’, ‘ಫಿಲ್ಮ್​ಫೇರ್’ ಸೇರಿದಂತೆ ಅನೇಕ ಗೌರವಗಳು ಸಂದಿವೆ. ಅವುಗಳ ಸಾಲಿಗೆ ಈಗ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕೂಡ ಸೇರ್ಪಡೆ ಆಗಿದೆ. ಕಳೆದ ಬಾರಿ ಈ ಗೌರವವು ರಜನಿಕಾಂತ್ ಅವರಿಗೆ ಸಂದಿತ್ತು. ಈ ಬಾರಿ ಆಶಾ ಅವರಿಗೆ ದೊರೆತಿದೆ.

ಆಶಾ ಪಾರೇಖ್ ಅವರಿಗೆ 2020ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಇದು ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಮನ್ನಣೆಯಾಗಿದೆ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಇಂದು ತಿಳಿಸಿದ್ದಾರೆ. ಶುಕ್ರವಾರ ನಡೆಯಲಿರುವ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 79 ವರ್ಷದ ಆಶಾ ಪಾರೇಖ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

1952ರಲ್ಲಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಆಶಾ ಪರೇಖ್ ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. 1959ರಲ್ಲಿ ‘ದಿಲ್ ದೇಕೆ ದೇಖೋ’ ಚಿತ್ರದ ಮೂಲಕ ಹೀರೋಯಿನ್ ಆಗಿ ಬಡ್ತಿ ಪಡೆದುಕೊಂಡರು. ಆಂದೋಲನ್ ಸಿನಿಮಾದಲ್ಲಿ ಕೊನೆಯ ಬಾರಿಗೆ ನಟಿಸಿ, ಅಲ್ಲಿಂದ ಸಿನಿಮಾ ರಂಗದಿಂದಲೇ ದೂರವಾದವರು.

ಆಶಾ ಪಾರೇಖ್ ಅವರಿಗೆ ಈ ಪ್ರತಿಷ್ಠಿತ ಫಾಲ್ಕೆ ಪ್ರಶಸ್ತಿ ಸಿಕ್ಕಿರುವುದು ಚಿತ್ರರಂಗ, ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ಸಂತಸ ತಂದಿದೆ. ಎಲ್ಲರೂ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.