ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ.
ಮೈಸೂರು ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಕೆ ಮಹದೇವ್ ಕುಲಪತಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಇಂದು ದಾಖಲೆಗಳನ್ನ ಬಿಡುಗಡೆ ಮಾಡಲು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಕುಲಪತಿ ಡಾ.ವಿದ್ಯಾಶಂಕರ್ ಬೆಂಬಲಿಗರು ಪ್ರೆಸ್ ಕ್ಲಬ್ ಗೆ ನುಗ್ಗಿ ಸುದ್ದಿಗೋಷ್ಠಿ ತಡೆದು ಡಾ.ಮಹದೇವ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ಕುರಿತು ಮೈಸೂರಿನ ಕೆ.ಆರ್.ಠಾಣೆಯಲ್ಲಿ ಕೆ.ಮಹದೇವ್ ದೂರು ನೀಡಿದ್ದಾರೆ.
ಮುಕ್ತ ವಿವಿಯ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ. ರಾತ್ರಿ ಪೂರ್ತಿ ಕರೆ ಮಾಡಿ ಕಿರುಕುಳ ನೀಡ್ತಿದ್ದಾರೆ. ಮೊಬೈಲ್ ಗೆ ರೀಚಾರ್ಜ್ ಮಾಡಿಸಿ, ಹಣ ನೀಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇದೆಲ್ಲವೂ ಆಕೆಯ ಗಂಡನಿಗೆ ಗೊತ್ತಾಗಿದೆ. ಮಹಿಳೆಯ ಗಂಡ ಮತ್ತು ಕುಲಪತಿ ಮಾತನಾಡಿರುವ ಆಡಿಯೋವನ್ನು ನಾನು ಬಿಡುಗಡೆ ಮಾಡಿದ್ದೇನೆ. ಇದನ್ನು ತಡೆಯುವ ಉದ್ದೇಶದಿಂದ ಕೆಎಸ್ ಒಯು ಮಂಡ್ಯ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಸುಧಾಕರ್ ಹೊಸಳ್ಳಿ ಸೇರಿ ಮತ್ತಿಬ್ಬರು ಪ್ರಯತ್ನ ಮಾಡಿದ್ದಾರೆ.
ಹಲ್ಲೆಗೆ ಯತ್ನಿಸಿರೋ ಡಾ.ಸುಧಾಕರ್ ಹೊಸಳ್ಳಿ ದಾವಣಗೆರೆ ಯ ರೀಜನಲ್ ಸೆಂಟರ್ ನಲ್ಲಿದ್ದಾಗಲೇ ಸಸ್ಪೆಂಡ್ ಆಗಿದ್ದ. ಅವನನ್ನ ಡಾ.ವಿದ್ಯಾಶಂಕರ್ ಮಂಡ್ಯಕ್ಕೆ ವರ್ಗಾವಣೆ ಮಾಡಿದ್ದಾನೆ. ಹಾಗಾಗಿ ವಿದ್ಯಾಶಂಕರ್ ಕುಮ್ಮಕ್ಕಿನಿಂದ ಸುಧಾಕರ್ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಮಹದೇವ್ ತಿಳಿಸಿದರು.










